Vijayanagara | ಕಾಮಗಾರಿ ಜೊತೆಗೆ ಆರೋಗ್ಯದ ಕಡೆಗೂ ಗಮನಹರಿಸಿ: ಎಚ್.ವಿಜಯಕುಮಾರ್
ಕೂಲಿಕಾರರ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ

ಕೊಟ್ಟೂರು (ವಿಜಯನಗರ ): ವಿಬಿ-ಜಿ ರಾಮ್‌ಜಿ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದ್ದು, ಪ್ರತಿಯೊಬ್ಬರೂ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು. ಕೆಲಸದ ಜೊತೆಗೆ ತಮ್ಮ ಆರೋಗ್ಯದ ಕಡೆಗೂ ಹೆಚ್ಚಿನ ಗಮನಹರಿಸಬೇಕು ಎಂದು ಕೊಟ್ಟೂರು ತಾಲ್ಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕ ಎಚ್. ವಿಜಯಕುಮಾರ್ ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ವಿಜಯನಗರ, ತಾಲ್ಲೂಕು ಪಂಚಾಯಿತಿ ಕೊಟ್ಟೂರು, ರಾಂಪುರ ಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಬೋರನಹಳ್ಳಿ ಗ್ರಾಮದ ಹೊರವಲಯದಲ್ಲಿ ವಿಬಿ-ಜಿ ರಾಮ್‌ಜಿ ಯೋಜನೆಯಡಿ ಕೈಗೊಂಡಿರುವ ಮಾಯಮ್ಮನಕಟ್ಟೆ ಗೋಕಟ್ಟೆ ಪುನಶ್ಚೇತನ ಕಾಮಗಾರಿ ಸ್ಥಳದಲ್ಲಿ ಮಂಗಳವಾರ ಆಯೋಜಿಸಿದ್ದ ಕೂಲಿಕಾರರ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನಿರ್ದೇಶನ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿ. ಆನಂದ್ ಕುಮಾರ್ ಅವರ ಮಾರ್ಗದರ್ಶನದಂತೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಪ್ರಸಕ್ತ ವರ್ಷ ಹೆಚ್ಚಿನ ಬಿಸಿಲಿದ್ದು, ಬಿಸಿಲಿನ ತಾಪಮಾನದಿಂದ ಕೂಲಿಕಾರರಿಗೆ ತಲೆಸುತ್ತು, ರಕ್ತದೊತ್ತಡ ಹೆಚ್ಚಳ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದರು.
ಕೂಲಿಕಾರರು ದಿನವಿಡೀ ಕೆಲಸದಲ್ಲಿ ತೊಡಗಿರುವುದರಿಂದ ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಸಮಯದ ಕೊರತೆ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಳದಲ್ಲಿಯೇ ಶಿಬಿರ ಆಯೋಜಿಸಲಾಗಿದ್ದು, ರಕ್ತದೊತ್ತಡ, ಮಧುಮೇಹ, ವಾಂತಿ, ಭೇದಿ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳ ಕುರಿತು ತಪಾಸಣೆ ನಡೆಸಲಾಗುತ್ತಿದೆ. ಕೂಲಿಕಾರರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ, ಶ್ರಮಿಕರು ಕೇವಲ ದೈನಂದಿನ ಕೂಲಿಯನ್ನಷ್ಟೇ ಗಮನಿಸದೆ ತಮ್ಮ ದೇಹದ ಸ್ವಾಸ್ಥ್ಯದ ಕಡೆಗೂ ಗಮನ ನೀಡಬೇಕು. ಸಣ್ಣಪುಟ್ಟ ಕಾಯಿಲೆಗಳೆಂದು ನಿರ್ಲಕ್ಷ್ಯ ವಹಿಸಿದರೆ ಭವಿಷ್ಯದಲ್ಲಿ ದೊಡ್ಡ ಮಟ್ಟದ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕಾಲಕಾಲಕ್ಕೆ ರಕ್ತದೊತ್ತಡ, ಮಧುಮೇಹ ಸೇರಿದಂತೆ ಅಗತ್ಯ ಆರೋಗ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾಮಗಾರಿ ಸ್ಥಳದಲ್ಲಿಯೇ ಆರೋಗ್ಯ ತಪಾಸಣೆ :
ವಿಬಿ-ಜಿ ರಾಮ್‌ಜಿ ಯೋಜನೆಯಡಿ ಕೆಲಸ ಮಾಡುವ ಕೂಲಿಕಾರರ ಆರೋಗ್ಯದ ದೃಷ್ಟಿಯಿಂದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಕಾಮಗಾರಿ ಸ್ಥಳದಲ್ಲಿಯೇ ವಿಶೇಷ ಆರೋಗ್ಯ ಶಿಬಿರ ನಡೆಸುವ ಮೂಲಕ ಕೂಲಿಕಾರರ ಆರೋಗ್ಯ ತಪಾಸಣೆ ಮಾಡಿ, ಉಚಿತ ಔಷಧೋಪಚಾರ ಒದಗಿಸಲಾಗುತ್ತಿದೆ ಎಂದು ತಾಪಂ ಕೊಟ್ಟೂರು ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿ. ಆನಂದ್ ಕುಮಾರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ್, ತಾಪಂ ಐಇಸಿ ಸಂಯೋಜಕ ಪ್ರಭುಕುಮಾರ್, ತಾಂತ್ರಿಕ ಸಹಾಯಕ ರವಿನಾಯ್ಕ, ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ಶಬೀನಾ, ಕರವಸೂಲಿಗಾರ ಓಬಳೇಶ್, ಡಿಇಒ ಜಗದೀಶ್, ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.






