Vijayanagara | ಸ್ಲಂ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್, ಜ್ಯಾಮಿಟ್ರಿ ಬಾಕ್ಸ್ ವಿತರಣೆ

ಹೊಸಪೇಟೆ/ವಿಜಯನಗರ : ಸ್ಲಂ ಜನರ ಸಂಘಟನೆ ಕರ್ನಾಟಕ–ವಿಜಯನಗರ ಜಿಲ್ಲಾ ಹೊಸಪೇಟೆ ಸಮಿತಿ ವತಿಯಿಂದ ಸ್ಲಂ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ಹಾಗೂ ಜ್ಯಾಮಿಟ್ರಿ ಬಾಕ್ಸ್ ವಿತರಣೆ ಕಾರ್ಯಕ್ರಮವನ್ನು ಸಮಾಜಸೇವಕ ಚಾಂದ್ ಬಾಷಾ ಅವರ ಪ್ರಾಯೋಜಕತ್ವದಲ್ಲಿ ನಗರದ ಗೌತಮ ಬುದ್ಧ ಎ.ಸಿ. ಫಂಕ್ಷನ್ ಹಾಲ್‌ನಲ್ಲಿ ಶನಿವಾರ ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಲಂ ಜನರ ಸಂಘಟನೆ ಕರ್ನಾಟಕದ ವಿಜಯನಗರ ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷ ಹೆಚ್. ಶೇಷ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ಕಂಡ ಸಮಾನ ಶಿಕ್ಷಣದ ಕನಸನ್ನು ನನಸಾಗಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಸ್ಲಂ ಪ್ರದೇಶದ ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದು. ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸಬೇಕು. ವಿದ್ಯಾಭ್ಯಾಸವನ್ನು ಮಧ್ಯದಲ್ಲೇ ಕೈಬಿಡದೆ ಗುರಿಯೊಂದಿಗೆ ಮುಂದುವರಿಯುವಂತೆ ವಿದ್ಯಾರ್ಥಿಗಳಿಗೆ ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಜಿಲ್ಲಾಧ್ಯಕ್ಷ ಕೆ.ಪಿ. ಉಮಾಪತಿ, ಗೌರವಾಧ್ಯಕ್ಷ ಎಂ.ಸಿ. ವೀರಸ್ವಾಮಿ, ಸ್ಲಂ ಜನರ ಸಂಘಟನೆ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಎನ್. ವೆಂಕಟೇಶ್, ಮಹಿಳಾ ಅಧ್ಯಕ್ಷೆ ಹುಲಿಗೆಮ್ಮ, ಸಂಘಟನಾ ಕಾರ್ಯದರ್ಶಿ ಗುತ್ತಿ ಕೈಲಾಸ್, ಸಮಾಜಸೇವಕ ಚಾಂದ್ ಬಾಷಾ, ಅಂಬೇಡ್ಕರ್ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ವರುಲು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್ ಹಾಗೂ ಜ್ಯಾಮಿಟ್ರಿ ಬಾಕ್ಸ್ ವಿತರಿಸಿ ಶಿಕ್ಷಣಕ್ಕೆ ಉತ್ತೇಜನ ನೀಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರು ಸಂಘಟನೆಯ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರು.






