Vijayanagara | ಸೌಹಾರ್ದಯುತವಾಗಿ ಗಣೇಶೋತ್ಸವ ಆಚರಣೆ : ಸಾರ್ವಜನಿಕರಿಗೆ ಕೊಟ್ಟೂರು ಪೊಲೀಸರ ಕೃತಜ್ಞತೆ

ಕೊಟ್ಟೂರು (ವಿಜಯನಗರ) : ಕೊಟ್ಟೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಐದು ದಿನಗಳ ಕಾಲ ನಡೆದ ಶ್ರೀ ಗಣೇಶೋತ್ಸವವನ್ನು ಶಾಂತಿಯುತವಾಗಿ, ಸೌಹಾರ್ದಯುತವಾಗಿ ಹಾಗೂ ಸಂಭ್ರಮದಿಂದ ಆಚರಿಸಲು ಸಹಕರಿಸಿದ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರಿಗೆ ಕೊಟ್ಟೂರು ಪೊಲೀಸ್ ಠಾಣೆ ಕೃತಜ್ಞತೆ ಸಲ್ಲಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಪೊಲೀಸ್ ಠಾಣೆ ಅಧಿಕಾರಿಗಳು, ಹಬ್ಬದ ಯಶಸ್ವಿ ಆಯೋಜನೆಗಾಗಿ ಅಹೋರಾತ್ರಿ ಶ್ರಮಿಸಿದ ಕಂದಾಯ ಇಲಾಖೆ, ಅಗ್ನಿಶಾಮಕ ಇಲಾಖೆ, ಪಟ್ಟಣ ಪಂಚಾಯತ್ ಹಾಗೂ ಜೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸೇವೆಯನ್ನು ವಿಶೇಷವಾಗಿ ಶ್ಲಾಘಿಸಿದ್ದಾರೆ.
ವಿವಿಧ ಗಣೇಶ ಮಂಡಳಿಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಗ್ರಾಮದ ಹಿರಿಯರು, ಮುಖಂಡರು ಹಾಗೂ ಮಾಧ್ಯಮ ಪ್ರತಿನಿಧಿಗಳು ನೀಡಿದ ಸಹಕಾರ ಮತ್ತು ಸೌಹಾರ್ದಯುತ ಬೆಂಬಲದಿಂದ ಯಾವುದೇ ಅಹಿತಕರ ಘಟನೆಗಳಿಲ್ಲದೆ ಗಣೇಶೋತ್ಸವ ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಾರ್ವಜನಿಕರು ತೋರಿದ ಶಿಸ್ತು, ಪ್ರೀತಿ, ವಿಶ್ವಾಸ ಹಾಗೂ ಸಹೋದರ ಭಾವನೆ ಮುಂದಿನ ದಿನಗಳಲ್ಲಿಯೂ ಇದೇ ರೀತಿಯಲ್ಲಿ ಮುಂದುವರಿಯಲಿ ಎಂದು ಕೊಟ್ಟೂರು ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಆಶಿಸಿದ್ದಾರೆ.






