Vijayanagara | ಗ್ರಾಮ ಪಂಚಾಯತಿ ನೌಕರರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಆಗ್ರಹ: ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ

ಹೊಸಪೇಟೆ/ವಿಜಯನಗರ: ಗ್ರಾಮ ಪಂಚಾಯತಿ ನೌಕರರ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಪ್ರಮುಖ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕೆಂದು ಒತ್ತಾಯಿಸಿ ಗ್ರಾಮ ಪಂಚಾಯತಿ ನೌಕರರ ಸಂಘ (ಸಿ.ಐ.ಟಿ.ಯು) ವತಿಯಿಂದ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ, ಕಳೆದ ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕನಿಷ್ಠ ವೇತನದ ಅಂತಿಮ ಅಧಿಸೂಚನೆಯನ್ನು ಸರ್ಕಾರ ಹೊರಡಿಸಿರುವುದನ್ನು ಸ್ವಾಗತಿಸಿ, ದುಡಿಯುವ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೊಳಿಸಲು ಕ್ರಮ ಕೈಗೊಂಡಿರುವ ಸರ್ಕಾರಕ್ಕೆ ಸಂಘದ ರಾಜ್ಯ ಸಮಿತಿಯ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.
ಆದಾಗ್ಯೂ, ಗ್ರಾಮ ಪಂಚಾಯತಿ ನೌಕರರ ಹಲವು ಪ್ರಮುಖ ಬೇಡಿಕೆಗಳು ಇನ್ನೂ ಇತ್ಯರ್ಥವಾಗದೇ ಉಳಿದಿದ್ದು, ಈ ಕುರಿತು ಸಚಿವರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆದಿದ್ದರೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಸಂಘದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಸಂಜೀವಿನಿ ಒಕ್ಕೂಟದ ಮೂಲಕ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ವಾಹನ ಚಾಲಕಿಯರು ಹಾಗೂ ಸ್ವಚ್ಛವಾಹಿನಿ ಮಹಿಳಾ ಕಾರ್ಮಿಕರು ಕಳೆದ ಎರಡು ವರ್ಷಗಳಿಂದ ಸಮರ್ಪಕ ವೇತನವಿಲ್ಲದೆ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದು, ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇವರನ್ನು ಗ್ರಾಮ ಪಂಚಾಯತಿ ನೌಕರರೆಂದು ಪರಿಗಣಿಸಿ, ಕನಿಷ್ಠ ವೇತನ ಅಧಿಸೂಚನೆಯನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಆಗ್ರಹಿಸಲಾಯಿತು.
ಸಂಘವು ಸರ್ಕಾರದ ಮುಂದೆ ಈ ಕೆಳಕಂಡ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ:
► ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರವಸೂಲಿಗಾರರು, ಕ್ಲರ್ಕ್-ಕಂ-ಡಾಟಾ ಎಂಟ್ರಿ ಆಪರೇಟರ್‌ಗಳು, ನೀರುಗಂಟಿಗಳು, ಜವಾನರು ಹಾಗೂ ಸ್ವಚ್ಛತಾಗಾರರನ್ನು ಏಕಕಾಲದಲ್ಲಿ ಸರ್ಕಾರಿ ನೌಕರರೆಂದು ಘೋಷಿಸಬೇಕು.
► ಸೇವಾ ಹಿರಿತನವನ್ನು ಪರಿಗಣಿಸಿ ವಾರ್ಷಿಕ ಇನ್‌ಕ್ರಿಮೆಂಟ್ ನೀಡಬೇಕು.
► ಗ್ರಾಮ ಪಂಚಾಯತಿ ನೌಕರರು ನಿವೃತ್ತಿ ಹೊಂದಿದಾಗ ಅಥವಾ ಮರಣ ಹೊಂದಿದಲ್ಲಿ ₹6 ಲಕ್ಷ ಇಡಗಂಟು (ಪರಿಹಾರ) ನೀಡಬೇಕು. ಜೊತೆಗೆ ಗ್ರಾಮ ಪಂಚಾಯತಿ ಠರಾವು ಮೂಲಕ ನೇಮಕಗೊಂಡು ಜಿಲ್ಲಾ ಪಂಚಾಯತಿಯಿಂದ ಅನುಮೋದನೆ ಪಡೆಯದ ಸಿಬ್ಬಂದಿಗಳಿಗೂ ಈ ಸೌಲಭ್ಯವನ್ನು ವಿಸ್ತರಿಸಬೇಕು.
ಬಾಕಿ ಉಳಿದಿರುವ ಎಲ್ಲಾ ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸಿ ಗ್ರಾಮ ಪಂಚಾಯತಿ ನೌಕರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸಂಘದ ಮುಖಂಡರು ಸರ್ಕಾರವನ್ನು ಒತ್ತಾಯಿಸಿದರು.






