Vijayanagara | ಮೇ 15ರವರೆಗೆ ವಸತಿ ಯೋಜನೆಯ ನೋಂದಣಿಗೆ ಅವಕಾಶ

ವಿಜಯನಗರ (ಹೊಸಪೇಟೆ) : ಜಿಲ್ಲೆಯ ವಸತಿ ರಹಿತ ಹಾಗೂ ನಿವೇಶನ ರಹಿತ ಅರ್ಹ ಫಲಾನುಭವಿಗಳು ಸರ್ಕಾರದ ವಿವಿಧ ವಸತಿ ಯೋಜನೆಗಳ ಲಾಭ ಪಡೆಯಲು ಮೇ 15ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೊಂಗ್ಜಾಯ್ ಮುಹಮ್ಮದ್ ಅಲಿ ಅಕ್ರಮ್ ಷಾ ತಿಳಿಸಿದ್ದಾರೆ.
2018ರ ಸಮೀಕ್ಷಾ ಪಟ್ಟಿಯಲ್ಲಿ ಅನರ್ಹರನ್ನು ಕೈಬಿಟ್ಟು, ಬಿಟ್ಟುಹೋಗಿರುವ ಅರ್ಹರನ್ನು ಸೇರಿಸಲು ಅವಕಾಶ ಕಲ್ಪಿಸಲಾಗಿದೆ. 2026-27ನೇ ಸಾಲಿನಲ್ಲಿ ರಾಜ್ಯಾದ್ಯಂತ ಬಿಎಲ್‌ಸಿ ಆಧಾರಿತ 1 ಲಕ್ಷ ಹೊಸ ಮನೆಗಳ ಗುರಿ ನಿಗದಿಯಾಗಿದ್ದು, ಗ್ರಾಮಸಭೆಗಳಲ್ಲಿ ಆನ್‌ಲೈನ್ ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ನಡೆಯಲಿದೆ.
ಆದ್ದರಿಂದ ಅರ್ಹ ಫಲಾನುಭವಿಗಳು ಮೇ 15ರೊಳಗೆ ತಮ್ಮ ಹೆಸರನ್ನು ಪಟ್ಟಿಗೆ ಸೇರಿಸಿಕೊಳ್ಳಬೇಕು. ನಂತರ ಪಟ್ಟಿಯನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಯಾವುದೇ ಅರ್ಹರು ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಸಂಬಂಧಿತ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ವಹಿಸಲಾಗಿದ್ದು, ಅರ್ಹರನ್ನು ಕೈಬಿಟ್ಟಿರುವುದು ಕಂಡುಬಂದರೆ ಪಿಡಿಒಗಳನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಪ್ರಕ್ರಿಯೆಯನ್ನು ಕಾಲಮಿತಿಯೊಳಗೆ ಯಶಸ್ವಿಗೊಳಿಸಲು ಎಲ್ಲಾ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವಸತಿ ರಹಿತ ಸಾರ್ವಜನಿಕರು ತಕ್ಷಣ ತಮ್ಮ ಗ್ರಾಮ ಪಂಚಾಯತಿಯನ್ನು ಸಂಪರ್ಕಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಿಇಒ ಮನವಿ ಮಾಡಿದ್ದಾರೆ.






