ವಿಜಯನಗರ | ಸಿರಿಧಾನ್ಯ, ಮರೆತು ಹೋದ ಖಾದ್ಯಗಳನ್ನು ನಿತ್ಯದ ಆಹಾರದಲ್ಲಿ ಬಳಸಿ : ಡಿಸಿ ಕವಿತಾ ಎಸ್.ಮನ್ನಿಕೇರಿ

ವಿಜಯನಗರ (ಹೊಸಪೇಟೆ), :ಸಾರ್ವಜನಿಕರು ಸಿರಿಧಾನ್ಯಗಳು ಹಾಗೂ ಮರೆತು ಹೋದ ಪರಂಪರೆಯ ಖಾದ್ಯಗಳನ್ನು ನಿತ್ಯದ ಆಹಾರದಲ್ಲಿ ಅಳವಡಿಸಿಕೊಳ್ಳಲು ಇಂತಹ ಸ್ಪರ್ಧೆಗಳು ಸಹಕಾರಿಯಾಗಿವೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
ನಗರದ ಸಮಗ್ರ ಕೃಷಿ ಪದ್ಧತಿಯ ಉತ್ಕೃಷ್ಟ ಕೇಂದ್ರದ ಸಭಾಂಗಣದಲ್ಲಿ ಕೃಷಿ ಇಲಾಖೆ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಂಗಳವಾರ ಮಾತನಾಡಿದರು.
ಸಿರಿಧಾನ್ಯ ಹಾಗೂ ಪರಂಪರೆಯ ಖಾದ್ಯಗಳನ್ನು ದಿನನಿತ್ಯದ ಆಹಾರ ಪದ್ಧತಿಯಲ್ಲಿ ಹೆಚ್ಚಾಗಿ ಬಳಸುವುದರಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ಇವುಗಳಲ್ಲಿ ಶಕ್ತಿಶಾಲಿ ಆ್ಯಂಟಿ ಆಕ್ಸಿಡೆಂಟ್‌ಗಳು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿರುವುದರಿಂದ ಸಕ್ಕರೆ ಕಾಯಿಲೆ, ರಕ್ತದೊತ್ತಡ ಸೇರಿದಂತೆ ಹಲವು ದೀರ್ಘಕಾಲದ ಕಾಯಿಲೆಗಳನ್ನು ತಡೆಗಟ್ಟಲು ಸಹಕಾರಿ ಆಗುತ್ತವೆ ಎಂದರು. ಸ್ಪರ್ಧೆಯಲ್ಲಿ ಭಾಗವಹಿಸಿದವರು ತಯಾರಿಸಿದ ವಿಭಿನ್ನ ಹಾಗೂ ರುಚಿಕರ ಆಹಾರಗಳನ್ನು ಪ್ರತಿ ಟೇಬಲ್‌ಗೆ ಭೇಟಿ ನೀಡಿ ರುಚಿ ನೋಡುವ ಅವಕಾಶ ದೊರೆತಿದ್ದು, ಅದು ನನಗೆ ಸಿಕ್ಕ ಭಾಗ್ಯ ಎಂದು ಹೇಳಿದರು.
ಸ್ಪರ್ಧೆಯಲ್ಲಿ ತಯಾರಿಸಿದ ಆಹಾರಗಳ ಫೋಟೋಗಳನ್ನು ಸೇರಿಸಿ, ತಯಾರಿಕಾ ವಿಧಾನ ಹಾಗೂ ಬಳಸಿದ ಸಾಮಗ್ರಿಗಳ ವಿವರಣೆಯೊಂದಿಗೆ ಪುಸ್ತಕ ರೂಪದಲ್ಲಿ ಪ್ರಕಟಿಸಿದರೆ ಸಾರ್ವಜನಿಕರಿಗೆ ಹೆಚ್ಚು ಉಪಯುಕ್ತವಾಗುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರಿಗೆ ಸಲಹೆ ನೀಡಿದರು. ಅಲ್ಲದೆ, ಆಹಾರ ತಯಾರಿಕಾ ವಿಡಿಯೋಗಳನ್ನು ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದರಿಂದ ಜನರಿಗೆ ಮಾಹಿತಿ ಸಿಗುವುದರ ಜೊತೆಗೆ ಸ್ಪರ್ಧಾರ್ಥಿಗಳ ಪ್ರತಿಭೆಗೂ ವೇದಿಕೆ ದೊರೆಯಲಿದೆ ಎಂದರು.
ಜಂಟಿ ಕೃಷಿ ನಿರ್ದೇಶಕ ಡಿ.ಟಿ. ಮಂಜುನಾಥ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 2 ಲಕ್ಷ 45 ಸಾವಿರ ಎಕರೆ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆ ಬೆಳೆಯಲಾಗುತ್ತಿದ್ದು, ಅದರಲ್ಲಿ 2 ಲಕ್ಷ 21 ಸಾವಿರ ಎಕರೆ ಮುಸುಕಿನ ಜೋಳ, ಜೊತೆಗೆ ನವಣೆ, ಸಜ್ಜೆ ಮತ್ತು ರಾಗಿಯನ್ನು ಎಲ್ಲ ಋತುವಿನಲ್ಲಿಯೂ ಬೆಳೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿರಿಧಾನ್ಯಗಳ ಮಹತ್ವವನ್ನು ಜನರಿಗೆ ತಿಳಿಸಲು ಸ್ಪರ್ಧೆ ಆಯೋಜಿಸಲಾಗಿದೆ ಎಂದರು.
ಜಿಲ್ಲೆಯ ಹೊಸಪೇಟೆ (15), ಕೂಡ್ಲಿಗಿ (06), ಹಡಗಲಿ (09), ಹಗರಿಬೊಮ್ಮನಹಳ್ಳಿ (04) ಮತ್ತು ಹರಪನಹಳ್ಳಿ (04) ತಾಲೂಕುಗಳಿಂದ ಒಟ್ಟು 38 ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಉಪ ನಿರ್ದೇಶಕ ನಯೀಮ್ ಪಾಷಾ, ಎಇಇಯು ಸುನೀತಾ, ಎಡಿಎ ನಾಜ್‌ನೀನ್ ನದಾಫ್, ಎಡಿಎ ವಿದ್ಯಾವತಿ, ಸ್ಪರ್ಧಾರ್ಥಿಗಳು ಹಾಗೂ ಕೃಷಿ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.







