Vijayanagara | ನಿವೇಶನ ಹಂಚಿಕೆ ವಿಳಂಬ, ಸರ್ಕಾರಿ ಜಮೀನು ಒತ್ತುವರಿ ಖಂಡಿಸಿ ಕರವೇ ಪ್ರತಿಭಟನೆ

ಹೊಸಪೇಟೆ/ವಿಜಯನಗರ, ಆ.5: ಕಡುಬಡವರಿಗೆ ನಿವೇಶನ ಹಂಚಿಕೆ ವಿಳಂಬ ಹಾಗೂ ಸರ್ಕಾರಿ ಜಮೀನುಗಳ ಅಕ್ರಮ ಒತ್ತುವರಿ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಸೇನೆ) ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಎರಡು ಪ್ರತ್ಯೇಕ ಮನವಿ ಪತ್ರಗಳನ್ನು ಸಲ್ಲಿಸಿತು.
ಒಂದು ವರ್ಷದ ಹಿಂದೆ ಸರ್ಕಾರ ಆಹ್ವಾನಿಸಿದ್ದ ನಿವೇಶನ ಅರ್ಜಿಗಳ ಕುರಿತು ಇದುವರೆಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು, ಸಾವಿರಾರು ಬಡ ಕುಟುಂಬಗಳ ಅರ್ಜಿಗಳು ಕಚೇರಿಗಳಲ್ಲೇ ಬಾಕಿ ಉಳಿದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅರ್ಹ ಫಲಾನುಭವಿಗಳಿಗೆ ತಕ್ಷಣ ನಿವೇಶನ ಹಂಚಿಕೆ ಪ್ರಕ್ರಿಯೆ ಆರಂಭಿಸಲು ಶಾಸಕರನ್ನು ಒಳಗೊಂಡ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದ ಅವರು, ಹಿಂದಿನ ಜಿಲ್ಲಾಧಿಕಾರಿ ಗೌರಿ ತ್ರಿವೇದಿ ಅವರಂತೆ ಹಾಲಿ ಜಿಲ್ಲಾಧಿಕಾರಿಯೂ ರಾಜಕೀಯ ಒತ್ತಡಕ್ಕೆ ಮಣಿಯದೆ ಬಡವರ ಪರವಾಗಿ ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಮತ್ತೊಂದು ಮನವಿಯಲ್ಲಿ, ಹೊಸಪೇಟೆ ನಗರ ವ್ಯಾಪ್ತಿಯ ಹಲವು ಸರ್ವೆ ಸಂಖ್ಯೆಗಳ ಸರ್ಕಾರಿ ಜಮೀನುಗಳನ್ನು ನಕಲಿ ದಾಖಲೆಗಳು, ಅಕ್ರಮ ನೋಂದಣಿ ಹಾಗೂ ಪಾಲು ವಿಭಾಗದ ಮೂಲಕ ಖಾಸಗಿ ಹೆಸರಿಗೆ ವರ್ಗಾಯಿಸಲು ಯತ್ನಿಸಿರುವ ಆರೋಪಗಳನ್ನು ಸಂಘಟನೆ ಮುಂದಿಟ್ಟಿತು.
ಈ ಕುರಿತು ಹಲವು ಬಾರಿ ದೂರು ಮತ್ತು ಮನವಿ ಸಲ್ಲಿಸಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸಮರ್ಪಕ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಸಂಘಟನೆ, ಅಕ್ರಮ ಒತ್ತುವರಿದಾರರು ಹಾಗೂ ನಕಲಿ ದಾಖಲೆ ಸೃಷ್ಟಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿತು.
ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಮೀನುಗಳನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಬೇಕು. ಮುಂದಿನ 15 ದಿನಗಳಲ್ಲಿ ಜಿಲ್ಲಾಡಳಿತ ಸ್ಪಷ್ಟ ಕ್ರಮ ಕೈಗೊಳ್ಳದಿದ್ದರೆ, ಸರ್ಕಾರಿ ಜಮೀನುಗಳಲ್ಲೇ ಕಡುಬಡವರು, ವಿಧವೆಯರು ಹಾಗೂ ಅಂಗವಿಕಲರಿಗೆ ಸಂಘಟನೆಯೇ ಗುಡಿಸಲು ನಿರ್ಮಿಸಿ ವಾಸಕ್ಕೆ ಅವಕಾಶ ಕಲ್ಪಿಸುವುದಾಗಿ ಕರವೇ (ಸ್ವಾಭಿಮಾನಿ ಸೇನೆ) ಎಚ್ಚರಿಕೆ ನೀಡಿತು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ, ಎಸ್.ಎಲ್. ಜಾಫರ್, ಎನ್.ಎಸ್. ಶ್ರೀನಿವಾಸ್, ಈಡಿಗರ ರಮೇಶ್, ಪ್ರಶಾಂತ್ ನಾಯ್ಕ್, ರಾಮಕೃಷ್ಣ, ಸುವರ್ಣ ರತ್ನ, ಶಮಾ, ಬಾನು ಬಿ, ಸುಮಾ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.






