Vijayanagara | ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ: ಕೊಟ್ಟೂರಿನಲ್ಲಿ ಪಂಚಮಸಾಲಿ ಸಮಾಜದಿಂದ ಬೈಕ್ ರ‍್ಯಾಲಿ

ಕೊಟ್ಟೂರು (ವಿಜಯನಗರ): ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಅಂಗವಾಗಿ ಪಂಚಮಸಾಲಿ ಸಮಾಜದ ವತಿಯಿಂದ ಪಟ್ಟಣದಲ್ಲಿ ಶನಿವಾರ ಬೃಹತ್ ಬೈಕ್ ರ‍್ಯಾಲಿ ಹಾಗೂ ಕಿತ್ತೂರು ರಾಣಿ ಚನ್ನಮ್ಮ ಅವರ ಭಾವಚಿತ್ರದ ಭವ್ಯ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಪಂಚಮಸಾಲಿ ಸಮಾಜದ ನೂರಾರು ಮಂದಿ ರ‍್ಯಾಲಿಯಲ್ಲಿ ಪಾಲ್ಗೊಂಡು ಸಮಾಜದ ಸಂಘಟನೆ ಹಾಗೂ ಜಾಗೃತಿಗೆ ಒತ್ತು ನೀಡಿದರು. ಸುಮಾರು 500 ಬೈಕ್‌ಗಳು ಹಾಗೂ ಒಂದು ಸಾವಿರಕ್ಕೂ ಅಧಿಕ ಸಮಾಜದ ಸದಸ್ಯರು ರ‍್ಯಾಲಿಯಲ್ಲಿ ಭಾಗವಹಿಸಿದ್ದರು.
ಮರಿಕೊಟ್ಟೂರೇಶ್ವರ ದೇವಸ್ಥಾನದ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಬೈಕ್ ರ‍್ಯಾಲಿಗೆ ಚಾಲನೆ ನೀಡಲಾಯಿತು. ಎಪಿಎಂಸಿ ರಸ್ತೆ, ಬಸ್ ನಿಲ್ದಾಣ, ರೇಣುಕಾ ಚಿತ್ರಮಂದಿರ ರಸ್ತೆ, ಉಜ್ಜಿನಿ ವೃತ್ತ, ಶ್ರೀ ಗುರು ಕೊಟ್ಟೂರೇಶ್ವರ ದೇವಸ್ಥಾನ ಹಾಗೂ ಗಾಂಧಿ ವೃತ್ತದ ಮಾರ್ಗವಾಗಿ ಸಾಗಿದ ರ‍್ಯಾಲಿಯು ಮರಳಿ ಮರಿಕೊಟ್ಟೂರೇಶ್ವರ ದೇವಸ್ಥಾನ ತಲುಪಿ ಸಮಾಪ್ತಿಗೊಂಡಿತು.
ರ‍್ಯಾಲಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಮಾಜದ ಮುಖಂಡರು ಹಾಗೂ ಯುವಕರು ಬೈಕ್‌ಗಳೊಂದಿಗೆ ಪಾಲ್ಗೊಂಡು ಜಯಘೋಷ ಮೊಳಗಿಸಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಚಾಪಿ ಚಂದ್ರಪ್ಪ, ಕಾರ್ಯದರ್ಶಿ ಹಳ್ಳಿ ಅಶೋಕ, ಸಮಾಜದ ಪ್ರಮುಖರಾದ ಚನ್ನಬಸವನಗೌಡ್ರು, ಪಂಚಮಸಾಲಿ ಸಮಾಜದ ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಕಿಚಿಡಿ ಕೊಟ್ರೇಶ, ಅಂಗಡಿ ಪಂಪಾಪತಿ, ಚಿರಿಬಿ ಪ್ರಕಾಶ, ರಾಂಪುರ ವಿವೇಕಾನಂದ, ಅಶೋಕ ಇಂಚಿನಿಯರ್, ಆಚೆಮನಿ ಮಲ್ಲಿಕಾರ್ಜುನ, ಶಿವಕುಮಾರ್ ಗೌಡ, ಅನಿಲ್ ಹೊಸಮನಿ, ವೀರೇಶಗೌಡ್ರು, ಐ.ಎಂ. ದಾರುಕೇಶ, ಎಂಎಂಜೆ ಶೋಭಿತ್, ಕನ್ನಹಳ್ಳಿ ಮಂಜುನಾಥ ಗೌಡ, ಕೋನಾಪುರ ಬಸವರಾಜ್, ಬದ್ದಿ ಮರಿಸ್ವಾಮಿ, ಚಿರಿಬಿ ಕೊಟ್ರೇಶ ಸೇರಿದಂತೆ ಸಮಾಜದ ಮುಖಂಡರು ಹಾಗೂ ನೂರಾರು ಮಂದಿ ಪಾಲ್ಗೊಂಡಿದ್ದರು.






