Vijayanagara | ಭಾರಿ ಮಳೆಗೆ ಕೊಟ್ಟೂರು ಬಸ್ ನಿಲ್ದಾಣ ಜಲಾವೃತ : ಪ್ರಯಾಣಿಕರ ಪರದಾಟ

ಕೊಟ್ಟೂರು/ವಿಜಯನಗರ: ಪಟ್ಟಣದಲ್ಲಿ ಸೋಮವಾರ ಸಂಜೆ ಸುರಿದ ಭಾರಿ ಮಳೆಯಿಂದ ಕೊಟ್ಟೂರು ಬಸ್ ನಿಲ್ದಾಣ ಸಂಪೂರ್ಣ ಜಲಾವೃತಗೊಂಡು, ವಿದ್ಯಾರ್ಥಿಗಳು, ವೃದ್ಧರು ಹಾಗೂ ಸಣ್ಣ ಮಕ್ಕಳು ಬಸ್‌ಗಾಗಿ ನೀರಿನಲ್ಲೇ ನಿಂತು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.
ಮಳೆಗಾಲ ಆರಂಭವಾದರೆ ಸಾಕು ಕೊಟ್ಟೂರು ಬಸ್ ನಿಲ್ದಾಣ ಕೆರೆಯಂತಾಗುತ್ತದೆ. ಮಳೆನೀರು ನಿಲ್ದಾಣದ ಆವರಣದಲ್ಲಿ ನಿಂತುಕೊಳ್ಳುವುದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಬಸ್‌ಗಾಗಿ ಕಾಯುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ನೀರಿನಲ್ಲೇ ನಿಲ್ಲಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ನಾಲ್ಕು ದಶಕಗಳಿಂದ ಬಗೆಹರಿಯದ ಸಮಸ್ಯೆ :
ಕೊಟ್ಟೂರು ಬಸ್ ನಿಲ್ದಾಣದ ಜಲಾವೃತ ಸಮಸ್ಯೆಗೆ ನಾಲ್ಕು ದಶಕಗಳು ಕಳೆದರೂ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿ ಮಳೆಗಾಲದಲ್ಲೂ ಇದೇ ಪರಿಸ್ಥಿತಿ ಮರುಕಳಿಸುತ್ತಿದ್ದರೂ ಕೆಎಸ್‌ಆರ್‌ಟಿಸಿ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.
ಶಾಸಕರಾಗಿ ಆಯ್ಕೆಯಾದ ಸಂದರ್ಭದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣದ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಲಾಗಿತ್ತು. ಆದರೆ ಕಾಮಗಾರಿ ಇನ್ನೂ ಆರಂಭವಾಗದೇ ಯೋಜನೆ ಸ್ಥಗಿತಗೊಂಡಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಶಾಶ್ವತ ಪರಿಹಾರಕ್ಕೆ ಒತ್ತಾಯ :
ಬಸ್ ನಿಲ್ದಾಣದಲ್ಲಿ ಮಳೆನೀರು ನಿಲ್ಲದಂತೆ ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಹಾಗೂ ನೂತನ ಬಸ್ ನಿಲ್ದಾಣ ಕಾಮಗಾರಿಯನ್ನು ಶೀಘ್ರ ಆರಂಭಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಮಸ್ಯೆ ಶೀಘ್ರ ಬಗೆಹರಿಯದಿದ್ದರೆ ವಿದ್ಯಾರ್ಥಿಗಳು, ಸಾರ್ವಜನಿಕರು, ಸಿಪಿಐ ಪಕ್ಷ ಹಾಗೂ ವಿದ್ಯಾರ್ಥಿ ಫೆಡರೇಶನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.






