Vijayanagara | ರೈತ ಮಹಿಳೆಯರ ಹೆಸರಿನಲ್ಲೂ ಜಮೀನಿನ ಖಾತೆ, ದಾಖಲೆಗಳಿರಲಿ : ಗರಿಮಾ ಪನ್ವಾರ್
ಮಹಿಳಾ ಕಿಸಾನ್ ದಿವಸ್ ಕಾರ್ಯಕ್ರಮ

ವಿಜಯನಗರ (ಹೊಸಪೇಟೆ) : ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪರಿಶ್ರಮ ಅಪಾರವಾಗಿದ್ದು, ಅವರ ಶ್ರಮಕ್ಕೆ ತಕ್ಕ ಮನ್ನಣೆ ದೊರೆಯಬೇಕು. ರೈತ ಮಹಿಳೆಯರ ಹೆಸರಿನಲ್ಲಿಯೂ ಜಮೀನಿನ ಖಾತೆ ಹಾಗೂ ದಾಖಲೆಗಳಿದ್ದರೆ ಅವರಿಗೆ ಹೆಚ್ಚಿನ ಸ್ವಾತಂತ್ರ್ಯ, ಆರ್ಥಿಕ ಭದ್ರತೆ ಮತ್ತು ಆತ್ಮವಿಶ್ವಾಸ ದೊರೆಯಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆ ವತಿಯಿಂದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಮಹಿಳಾ ಕಿಸಾನ್ ದಿವಸ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಕ್ಷೇತ್ರದಲ್ಲಿ ಹಗಲಿರುಳು ಶ್ರಮಿಸುವ ಮಹಿಳೆಯರಿಗೆ ಜಮೀನಿನ ದಾಖಲೆಗಳು ಮತ್ತು ಆಸ್ತಿಯಲ್ಲಿ ಸಮಾನ ಹಕ್ಕು ಹಾಗೂ ಪ್ರಾಮುಖ್ಯತೆ ದೊರೆಯಬೇಕು. ಕೃಷಿ ಉತ್ಪಾದನೆಯಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದ್ದು, ದೇಶದ ಒಟ್ಟು ಉತ್ಪಾದನೆಯಲ್ಲಿ ಶೇ. 17ರಷ್ಟು ಕೊಡುಗೆ ನೀಡುತ್ತಿರುವ ಮಹಿಳಾ ಕೃಷಿಕರ ಶ್ರಮವನ್ನು ಗುರುತಿಸಿ ಗೌರವಿಸುವುದು ಹಾಗೂ ಅವರ ಹಕ್ಕುಗಳನ್ನು ರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ. ರೈತ ಮಹಿಳೆಯರು ಪ್ರಗತಿಪರ ರೈತರಾಗಿ ಗುರುತಿಸಿಕೊಳ್ಳುತ್ತಿರುವುದು ಗಮನಾರ್ಹ ಸಂಗತಿ. ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅಗತ್ಯವಿದೆ. ರೈತ ಮಹಿಳೆಯರು ಹಲವು ಸವಾಲುಗಳನ್ನು ಎದುರಿಸುತ್ತಿದ್ದು, ಅವುಗಳನ್ನು ಮೆಟ್ಟಿ ನಿಂತು ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು ಎಂದರು.
ಮಹಿಳೆಯರು ತೆಗೆದುಕೊಳ್ಳುವ ನಿರ್ಧಾರಗಳು ಅವರ ಜೀವನದ ದಿಕ್ಕನ್ನೇ ಬದಲಾಯಿಸಬಲ್ಲವು. ಭವಿಷ್ಯದಲ್ಲಿ ಉತ್ತಮ ಬದಲಾವಣೆ ತಂದುಕೊಳ್ಳುವ ಗುರಿಯೊಂದಿಗೆ ಮುನ್ನಡೆಯಬೇಕು. ಅಂದುಕೊಂಡ ಗುರಿಯನ್ನು ಸಾಧಿಸಲು ಸಾಧ್ಯವಾಗದಿದ್ದರೂ ನಿರಂತರ ಪರಿಶ್ರಮದ ಮೂಲಕ ಪ್ರಗತಿಪರ ರೈತರಾಗಿ ಹೊರಹೊಮ್ಮುವ ಸಂಕಲ್ಪ ಹೊಂದಬೇಕು ಎಂದು ಸಲಹೆ ನೀಡಿದರು.
ಕೃಷಿ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ, ಪಿಂಚಣಿ ಮತ್ತು ಸಬ್ಸಿಡಿಗಳನ್ನು ಪಡೆಯಲು ಅಗತ್ಯ ದಾಖಲೆಗಳನ್ನು ಹೊಂದಿರುವ ಕುರಿತು ರೈತ ಮಹಿಳೆಯರಲ್ಲಿ ಜಾಗೃತಿ ಮೂಡಿಸಬೇಕು. ಮಹಿಳೆಯರ ಹೆಸರಿನಲ್ಲಿ ಜಮೀನಿನ ದಾಖಲೆಗಳಿದ್ದರೆ ಅವರು ಸ್ವಾವಲಂಬಿಗಳಾಗಿ ತಮ್ಮ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳಲು ಅನುಕೂಲವಾಗುತ್ತದೆ. ಕುಟುಂಬ ಹಾಗೂ ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಹಕ್ಕು ಮತ್ತು ಗೌರವ ದೊರೆಯಬೇಕು ಎಂದು ತಿಳಿಸಿದರು.
ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ :
ಹೆಣ್ಣುಮಕ್ಕಳಿಗೆ ಬಾಲ್ಯವಿವಾಹ ಮಾಡಿ ಅವರ ಭವಿಷ್ಯವನ್ನು ಮೊಟಕುಗೊಳಿಸುವ ಬದಲು ಉತ್ತಮ ಶಿಕ್ಷಣ ನೀಡಿ, ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಅವಕಾಶ ಕಲ್ಪಿಸಬೇಕು. ಮಹಿಳೆಯರ ಪರಿಶ್ರಮಕ್ಕೆ ಸೂಕ್ತ ಮನ್ನಣೆ ದೊರೆತಾಗ ಅವರು ಯಶಸ್ವಿ ಮಹಿಳೆಯರಾಗಿ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ ಎಂದು ಗರಿಮಾ ಪನ್ವಾರ್ ಆಶಯ ವ್ಯಕ್ತಪಡಿಸಿದರು.
ಕೃಷಿ ಉತ್ಪನ್ನಗಳು, ಕಸೂತಿ ಕಲೆಗಳ ಪ್ರದರ್ಶನ :
ಮಹಿಳಾ ಕಿಸಾನ್ ದಿವಸ್ ಅಂಗವಾಗಿ ಜಿಲ್ಲಾ ಮಟ್ಟದ ಕೃಷಿ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು. ಜಿಲ್ಲಾ ಪಂಚಾಯಿತಿ ಸಿಇಒ ಗರಿಮಾ ಪನ್ವಾರ್ ಪ್ರದರ್ಶನ ಉದ್ಘಾಟಿಸಿ, ರೈತರೊಂದಿಗೆ ಸಂವಾದ ನಡೆಸಿ ಮಾಹಿತಿ ಪಡೆದುಕೊಂಡರು.
ಪ್ರದರ್ಶನದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ತಂದಿದ್ದ ಸಿರಿಧಾನ್ಯಗಳಾದ ಸಜ್ಜೆ, ನವಣೆ, ಗೋಧಿ ತೆನೆ, ಚಪ್ಪರದ ಅವರೆ ಹಾಗೂ ಸಾವಯವ ಉತ್ಪನ್ನಗಳಾದ ಪಪ್ಪಾಯಿ, ನಿಂಬೆ, ಟೊಮೆಟೊ ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳನ್ನು ಪ್ರದರ್ಶಿಸಲಾಯಿತು. ವಿಶೇಷವಾಗಿ ಬಂಜಾರ ಸಮುದಾಯದ ಕೈಕಸೂತಿ ಕಲೆಗಳು, ವಿವಿಧ ಬಗೆಯ ಸೀರೆಗಳು, ಬಳೆಗಳು ಹಾಗೂ ಕರಕುಶಲ ವಸ್ತುಗಳು ನೋಡುಗರ ಆಕರ್ಷಣೆಯ ಕೇಂದ್ರವಾಗಿದ್ದವು.
ಕಾರ್ಯಕ್ರಮದಲ್ಲಿ ವಿವಿಧ ಕೃಷಿ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು. ಸ್ವಸಹಾಯ ಸಂಘಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಡಾ. ಪ್ರೊ. ಸುನೀತಾ ಅವರು ಮಹಿಳಾ ಕಿಸಾನ್ ದಿವಸ್ ಅಂಗವಾಗಿ ಕೃಷಿ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆಯ ಪ್ರಾಮುಖ್ಯತೆ ಹಾಗೂ ಅವಕಾಶಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಪ್ರಭುರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರೈತ ಮಹಿಳೆಯರು ಉಪಸ್ಥಿತರಿದ್ದರು.






