Vijayanagara | ಮಾದಕವಸ್ತುಗಳಿಗೆ ‘ಬೇಡ’ ಎನ್ನೋಣ, ಬದುಕಿಗೆ ‘ಹೌದು’ ಎನ್ನೋಣ: ನ್ಯಾ.ಎನ್.ಸುಬ್ರಮಣ್ಯ

ವಿಜಯನಗರ (ಹೊಸಪೇಟೆ) : ಮಾದಕವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆಯನ್ನು ತಡೆಗಟ್ಟುವ ಮೂಲಕ ಆರೋಗ್ಯಕರ ಹಾಗೂ ಸದೃಢ ಸಮಾಜ ನಿರ್ಮಿಸುವ ಉದ್ದೇಶದಿಂದ ಭಾರತ ಸರ್ಕಾರವು ‘ನಶಾ ಮುಕ್ತ ಭಾರತ ಅಭಿಯಾನ’ ಜಾರಿಗೊಳಿಸಿದೆ. ಯುವಜನತೆ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಮಾದಕವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ಎನ್. ಸುಬ್ರಮಣ್ಯ ಹೇಳಿದರು.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 2020ರ ಆಗಸ್ಟ್ 15ರಂದು ಆರಂಭಿಸಿದ ಈ ಅಭಿಯಾನವು ಮೊದಲಿಗೆ 272 ಜಿಲ್ಲೆಗಳಲ್ಲಿ ಅನುಷ್ಠಾನಗೊಂಡಿತ್ತು. ಪ್ರಸ್ತುತ ದೇಶದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ. ಶಾಲಾ-ಕಾಲೇಜುಗಳು ಹಾಗೂ ಸಾರ್ವಜನಿಕ ವಲಯಗಳಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಮಾದಕವಸ್ತುಗಳ ತಯಾರಿಕೆ, ಮಾರಾಟ, ಸಾಗಾಣಿಕೆ ಮತ್ತು ಅಕ್ರಮ ಬಳಕೆಯನ್ನು ನಿಯಂತ್ರಿಸಲು ಮಾದಕದ್ರವ್ಯ ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ–1985 ಜಾರಿಯಲ್ಲಿದೆ. ಕಾಯ್ದೆಯ ಉಲ್ಲಂಘನೆಗೆ ಅಪರಾಧದ ಸ್ವರೂಪಕ್ಕೆ ಅನುಗುಣವಾಗಿ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿದೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಮಾದಕವಸ್ತುಗಳ ಅಕ್ರಮ ಸಾಗಾಣಿಕೆ ಮತ್ತು ವ್ಯಾಪಾರ ತಡೆಗೆ ಕಾರ್ಯಾಚರಣೆ ನಡೆಸುತ್ತಿವೆ. ವ್ಯಸನಕ್ಕೆ ಒಳಗಾದವರಿಗೆ ಚಿಕಿತ್ಸೆ, ಆಪ್ತಸಮಾಲೋಚನೆ ಮತ್ತು ಪುನರ್ವಸತಿ ಸೌಲಭ್ಯಗಳನ್ನೂ ಒದಗಿಸಲಾಗುತ್ತಿದೆ ಎಂದು ಹೇಳಿದರು.
ಮಾದಕವಸ್ತು ಸೇವನೆಯಿಂದ ಮೆದುಳಿನ ಕಾರ್ಯಕ್ಷಮತೆ ಕುಂಠಿತವಾಗುವುದರ ಜೊತೆಗೆ ಖಿನ್ನತೆ, ಆತಂಕ, ಹೃದಯ ಮತ್ತು ಯಕೃತ್ತಿನ ಸಮಸ್ಯೆಗಳು ಉಂಟಾಗಬಹುದು. ಕುಟುಂಬದಲ್ಲಿ ಆರ್ಥಿಕ ಸಂಕಷ್ಟ, ಮಾನಸಿಕ ಒತ್ತಡ ಹಾಗೂ ಕೌಟುಂಬಿಕ ಕಲಹಕ್ಕೂ ಇದು ಕಾರಣವಾಗುತ್ತದೆ. ವಿಶೇಷವಾಗಿ ಯುವಜನತೆ ವ್ಯಸನಕ್ಕೆ ಬಲಿಯಾದರೆ ದೇಶದ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.
ಮಕ್ಕಳ ನಡವಳಿಕೆ ಹಾಗೂ ಸ್ನೇಹಿತರ ಬಳಗದ ಬಗ್ಗೆ ಪೋಷಕರು ಗಮನಹರಿಸಬೇಕು. ಅವರೊಂದಿಗೆ ಮುಕ್ತವಾಗಿ ಸಂವಹನ ನಡೆಸಿ ಮಾದಕವಸ್ತುಗಳ ಅಪಾಯಗಳ ಕುರಿತು ಅರಿವು ಮೂಡಿಸಬೇಕು. ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಜಾಥಾ, ಉಪನ್ಯಾಸ, ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಮಾದಕವಸ್ತುಗಳ ಅಕ್ರಮ ಮಾರಾಟ ಅಥವಾ ಸಾಗಾಣಿಕೆ ಕಂಡುಬಂದಲ್ಲಿ ಸಂಬಂಧಪಟ್ಟ ಪೊಲೀಸ್ ಇಲಾಖೆ ಅಥವಾ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.
ಮಾದಕವಸ್ತು ವ್ಯಸನಕ್ಕೆ ಒಳಗಾದವರನ್ನು ತಿರಸ್ಕರಿಸದೆ, ಅವರಿಗೆ ಸೂಕ್ತ ಚಿಕಿತ್ಸೆ ಮತ್ತು ಪುನರ್ವಸತಿ ದೊರಕಿಸಲು ಸಮಾಜ ಸಹಕರಿಸಬೇಕು. ವ್ಯಸನಮುಕ್ತ ಸಮಾಜ ನಿರ್ಮಾಣ ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು, ಯುವಜನ ಸಂಘಟನೆಗಳು ಹಾಗೂ ಸಾರ್ವಜನಿಕರು ಒಗ್ಗಟ್ಟಿನಿಂದ ಕೈಜೋಡಿಸಬೇಕು ಎಂದರು.
ಮಾದಕವಸ್ತು ವ್ಯಸನದಿಂದ ಹೊರಬರಲು ಬಯಸುವವರು ಕೇಂದ್ರ ಸರ್ಕಾರದ ರಾಷ್ಟ್ರೀಯ ವ್ಯಸನಮುಕ್ತಿ ಸಹಾಯವಾಣಿ 14446 ಸಂಪರ್ಕಿಸಿ ಮಾರ್ಗದರ್ಶನ ಪಡೆಯಬಹುದು. ಮಾದಕವಸ್ತುಗಳಿಗೆ ‘ಬೇಡ’ ಎನ್ನೋಣ, ಬದುಕಿಗೆ ‘ಹೌದು’ ಎನ್ನೋಣ. ಯುವಶಕ್ತಿಯನ್ನು ವ್ಯಸನದಿಂದ ಮುಕ್ತಗೊಳಿಸಿ ಆರೋಗ್ಯವಂತ ಹಾಗೂ ಸದೃಢ ಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿಎಚ್‌ಒ ಡಾ. ಲಿಂಗರಾಜು ವಹಿಸಿದ್ದರು. ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.






