Vijayanagara | ಉತ್ತಮ ಮಳೆಗೆ ಜೀವಕಳೆ ಪಡೆದ ಮಾಲವಿ ಜಲಾಶಯ

ಹೊಸಪೇಟೆ/ವಿಜಯನಗರ: ಕಳೆದ ಎರಡು ದಿನಗಳಿಂದ ಸುರಿದ ಉತ್ತಮ ಮಳೆಯಿಂದ ವಿಜಯನಗರ ಜಿಲ್ಲೆಯ ಮಾಲವಿ ಜಲಾಶಯ ಮತ್ತೆ ಜೀವಕಳೆ ಪಡೆದುಕೊಂಡಿದ್ದು, ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.
ಹಲವು ದಿನಗಳಿಂದ ಒಣಗಿದ್ದ ಜಲಾಶಯದ ಅಂಗಳ ಇದೀಗ ನೀರಿನಿಂದ ಆವರಿಸಿಕೊಂಡು ಪ್ರಕೃತಿ ಸೊಬಗಿನಿಂದ ಕಂಗೊಳಿಸುತ್ತಿದೆ. ತಾಲೂಕಿನ ರೈತರ ಜೀವನಾಡಿಯಾಗಿರುವ ಈ ಜಲಾಶಯ ಕೃಷಿ ಚಟುವಟಿಕೆಗಳಿಗೆ ಮಾತ್ರವಲ್ಲದೆ ಸಕಲ ಜೀವ ಸಂಕುಲಕ್ಕೂ ಜೀವಜಲ ಒದಗಿಸುವ ಪ್ರಮುಖ ಆಧಾರವಾಗಿದೆ.
ಜಲಾಶಯದಲ್ಲಿ ಸಮರ್ಪಕವಾಗಿ ನೀರು ಸಂಗ್ರಹವಾದರೆ ಮಾತ್ರ ತಾಲೂಕಿನಾದ್ಯಂತ ನೀರಾವರಿ ಚಟುವಟಿಕೆಗಳಿಗೆ ಚೈತನ್ಯ ಸಿಗುತ್ತದೆ. ಇಲ್ಲವಾದರೆ ರೈತರು ಬರದ ಬವಣೆಗೆ ಸಿಲುಕುವ ಪರಿಸ್ಥಿತಿ ಎದುರಾಗುತ್ತದೆ.
ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾವಿರಾರು ಎಕರೆ ಕೃಷಿಭೂಮಿಗೆ ನೀರಾವರಿ ಒದಗಿಸುವ ಈ ಜಲಾಶಯವನ್ನು ತಾಲೂಕಿನ “ನೀರಾವರಿ ಸಂಜೀವಿನಿ” ಎಂದು ಕರೆಯಲಾಗುತ್ತದೆ. ಅಂತರ್ಜಲ ಮಟ್ಟ ಹೆಚ್ಚಿಸುವ ಮೂಲಕ ರೈತರ ಬದುಕಿಗೆ ಆಸರೆಯಾಗಿರುವ ಜಲಾಶಯ ಅನ್ನದಾತರ ಬದುಕಿನ ಜಲಮಾತೆಯಾಗಿ ಗುರುತಿಸಿಕೊಂಡಿದೆ.
ಜಲಾಶಯದ ಹಿನ್ನೀರಿನ ಪ್ರದೇಶ ಪರಿಸರದ ದೃಷ್ಟಿಯಿಂದಲೂ ಅಪಾರ ಮಹತ್ವ ಹೊಂದಿದೆ. ದೇಶ-ವಿದೇಶಗಳಿಂದ ವಿವಿಧ ಜಾತಿಯ ಪಕ್ಷಿಗಳು ಆಹಾರ ಮತ್ತು ಸಂತಾನೋತ್ಪತ್ತಿಗಾಗಿ ಇಲ್ಲಿಗೆ ಆಗಮಿಸುತ್ತವೆ. ರಾಷ್ಟ್ರೀಯ ಪಕ್ಷಿಯಾದ ನವಿಲುಗಳೂ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಇಲ್ಲಿ ಜೀವ ವೈವಿಧ್ಯಕ್ಕೆ ಅನುಕೂಲಕರ ವಾತಾವರಣವಿದೆ ಎಂಬುದನ್ನು ತೋರಿಸುತ್ತದೆ.
ಇದೀಗ ಸುರಿದ ಮಳೆಯಿಂದ ಜಲಾಶಯ ಮತ್ತೆ ನೀರಿನಿಂದ ತುಂಬತೊಡಗಿದ್ದು, “ಶೀಘ್ರವೇ ಜಲಾಶಯ ಸಂಪೂರ್ಣ ಭರ್ತಿಯಾಗಿ ತಾಲೂಕಿನ ಕೃಷಿ ಚಟುವಟಿಕೆಗಳಿಗೆ ಆಸರೆಯಾಗಲಿ” ಎಂಬುದು ರೈತರ ಆಶಯವಾಗಿದೆ.






