Vijayanagara | ಕಿತ್ತೂರು ಚೆನ್ನಮ್ಮನ ಆದರ್ಶಗಳು ಮಹಿಳೆಯರಿಗೆ ಪ್ರೇರಣೆಯಾಗಲಿ: ನೇತ್ರಾವತಿ

ಕೂಡ್ಲಿಗಿ/ವಿಜಯನಗರ : ಪ್ರತಿಕೂಲ ಪರಿಸ್ಥಿತಿಯಲ್ಲೂ ತಾಯ್ನಾಡಿನ ಗೌರವಕ್ಕಾಗಿ ಹೋರಾಡಿದ ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಆದರ್ಶಗಳು ಇಂದಿನ ಮಹಿಳೆಯರಲ್ಲಿ ಧೈರ್ಯ ಹಾಗೂ ಸ್ವಾಭಿಮಾನ ಬೆಳೆಸಲು ಪ್ರೇರಣೆಯಾಗಬೇಕು ಎಂದು ತಹಸೀಲ್ದಾರ್ ವಿ.ಕೆ.ನೇತ್ರಾವತಿ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಮಸಾಲಿ ಸಮಾಜದ ವತಿಯಿಂದ ಆಯೋಜಿಸಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಮಹಿಳೆಯರು ಕೇವಲ ಮನೆಗೆ ಸೀಮಿತವಾಗಿದ್ದ ಕಾಲದಲ್ಲೇ ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿ ಹೋರಾಡಿದ ಚೆನ್ನಮ್ಮ ಅವರ ತ್ಯಾಗ ಮತ್ತು ಶೌರ್ಯ ಯುವಜನತೆಗೆ ಮಾದರಿಯಾಗಿದೆ ಎಂದರು.
ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಹೊಂಬಾಳೆ ರೇವಣ್ಣ ಮಾತನಾಡಿ, ಕಿತ್ತೂರು ಉತ್ಸವದ ಮಾದರಿಯಲ್ಲಿ ಕೂಡ್ಲಿಗಿಯಲ್ಲಿಯೂ ರಾಣಿ ಚೆನ್ನಮ್ಮ ಜಯಂತಿಯನ್ನು ಎರಡು ದಿನಗಳ ಕಾಲ ಅದ್ದೂರಿಯಾಗಿ ಆಚರಿಸಲು ಶಾಸಕರು ಮುಂದಾಗಬೇಕು. ಅಲ್ಲದೆ, ಈ ಉತ್ಸವಕ್ಕೆ ಸರ್ಕಾರಿ ಉತ್ಸವದ ಮಾನ್ಯತೆ ದೊರೆಯಬೇಕು ಎಂದು ಆಗ್ರಹಿಸಿದರು. ಮುಂದಿನ ದಿನಗಳಲ್ಲಿ ಹೊಸಹಳ್ಳಿ ಹೋಬಳಿಯಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜಿಸಲು ತಾಲೂಕು ಆಡಳಿತದ ಸಹಕಾರವನ್ನೂ ಕೋರಿದರು.
ರೈತ ಸಂಘದ ದೇವರಮನೆ ಮಹೇಶ್ ಹಾಗೂ ನಿವೃತ್ತ ಶಿಕ್ಷಕ ಕೆ. ನಾಗನಗೌಡ ಅವರು ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಶೌರ್ಯ ಮತ್ತು ಹೋರಾಟವನ್ನು ಸ್ಮರಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಕೊಟ್ಟೂರು ರಸ್ತೆಯಲ್ಲಿರುವ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಪಂಚಮಸಾಲಿ ಸಮಾಜದ ಮುಖಂಡರು ಪೂಜೆ ಸಲ್ಲಿಸಿ ಗೌರವ ಸಮರ್ಪಿಸಿದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್. ವೆಂಕಟೇಶ್, ಉಪತಹಸೀಲ್ದಾರ್ ಎಚ್. ರಾಮಸ್ವಾಮಿ, ಖಾನವಳಿ ಕೊಟ್ರೇಶ್, ಗುಳಿಗೆ ವೀರೇಂದ್ರ ಸೇರಿದಂತೆ ಸಮಾಜದ ಹಲವು ಮುಖಂಡರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.






