Vijayanagara | ಪುಟ್ಟ ಮಕ್ಕಳ ನೃತ್ಯಕ್ಕೆ ಶಾಸಕ ಗವಿಯಪ್ಪರಿಂದ ಪ್ರಶಂಸೆ

ಹೊಸಪೇಟೆ/ವಿಜಯನಗರ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಜೆ.ಪಿ. ನಗರ ಎಕ್ಸ್‌ಟೆನ್ಷನ್‌ನ ಜಾಕ್ಸ್ ಅಂಡ್ ಜಿಲ್ಸ್ ಶಾಲೆಯ ಎಲ್‌ಕೆಜಿ ಹಾಗೂ ಯುಕೆಜಿ ವಿದ್ಯಾರ್ಥಿಗಳು ಇದೇ ಮೊದಲ ಬಾರಿಗೆ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಮನ ಸೆಳೆದರು.
ಪುಟಾಣಿ ಮಕ್ಕಳ ದೇಶಭಕ್ತಿ ಹಾಗೂ ಸಾಂಸ್ಕೃತಿಕ ನೃತ್ಯ ಪ್ರದರ್ಶನ ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು. ಮುದ್ದು ಮಕ್ಕಳ ಆಕರ್ಷಕ ನೃತ್ಯಕ್ಕೆ ಕಾರ್ಯಕ್ರಮದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಯಿತು.
ಮಕ್ಕಳ ಪ್ರತಿಭೆಯನ್ನು ಮೆಚ್ಚಿದ ವಿಜಯನಗರ ಶಾಸಕ ಎಚ್.ಆರ್. ಗವಿಯಪ್ಪ ಅವರು ಮಕ್ಕಳನ್ನು ವೇದಿಕೆಗೆ ಕರೆಸಿ ಪ್ರೀತಿಯಿಂದ ಅಭಿನಂದಿಸಿ ಪ್ರಶಸ್ತಿ ಪತ್ರಗಳನ್ನು ನೀಡಿ ಪ್ರೋತ್ಸಾಹಿಸಿದರು. ಬಳಿಕ ಮಕ್ಕಳೊಂದಿಗೆ ಛಾಯಾಚಿತ್ರ ತೆಗೆಸಿಕೊಂಡು ಅವರ ಕಲಾ ಪ್ರತಿಭೆಗೆ ಉತ್ತೇಜನ ನೀಡಿದರು.
ಎಲ್‌ಕೆಜಿ ಹಾಗೂ ಯುಕೆಜಿ ವಿದ್ಯಾರ್ಥಿಗಳಿಗೆ ಇದೇ ಮೊದಲ ಬಾರಿಗೆ ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಾಂಸ್ಕೃತಿಕ ಪ್ರದರ್ಶನ ನೀಡುವ ಅವಕಾಶ ದೊರೆತಿದ್ದು, ಗಣ್ಯರ ಪ್ರೋತ್ಸಾಹವು ಮಕ್ಕಳ ಉತ್ಸಾಹ ಹಾಗೂ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪಿ.ಟಿ. ಪರಮೇಶ್ವರ್ ನಾಯ್ಕ್, ಶಿಲ್ಪಾ ಕುರಿಯನ್, ವಿದ್ಯಾ ಜಗದೀಶ್, ಭಾರತಿ ಜನಾದ್ರಿ, ಬೃಂದಾ ನವೇಳಿ, ರಮ್ಯಾ ಶಾಸ್ತ್ರಿ, ಶ್ರುತಿ, ಶ್ರುತಿ ಪ್ರಬಂಧಂ, ನಾಗಮಣಿ, ನಾಗರತ್ನ, ಮಂಗಳಗೌರಿ, ರಾಜೇಶ್ವರಿ ಸೇರಿದಂತೆ ಅಧಿಕಾರಿಗಳು, ಶಿಕ್ಷಕರು, ಪೋಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಪುಟ್ಟ ಮಕ್ಕಳ ಮನಮೋಹಕ ನೃತ್ಯ ಪ್ರದರ್ಶನವು ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.






