Vijayanagara | ಆ.10ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ

ಕೂಡ್ಲಿಗಿ/ವಿಜಯನಗರ: ಮಕ್ಕಳ ಆರೋಗ್ಯ ರಕ್ಷಣೆಯ ಉದ್ದೇಶದಿಂದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಹಾಗೂ ಮಾಪ್‌ಅಪ್ ದಿನವನ್ನು ಪರಿಣಾಮಕಾರಿಯಾಗಿ ಆಚರಿಸಲು ಕೂಡ್ಲಿಗಿ ತಾಲೂಕು ಆಡಳಿತ ಸಿದ್ಧತೆ ಕೈಗೊಂಡಿದೆ.
ತಹಸೀಲ್ದಾರ್ ನೇತ್ರಾವತಿ ಅವರ ಅಧ್ಯಕ್ಷತೆಯಲ್ಲಿ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಆಗಸ್ಟ್ 10ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಹಾಗೂ ಆಗಸ್ಟ್ 17ರಂದು ಮಾಪ್‌ಅಪ್ ದಿನ ಆಚರಿಸುವ ಕುರಿತು ರೂಪುರೇಷೆ ಅಂತಿಮಗೊಳಿಸಲಾಯಿತು.
ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರದೀಪ್ ಮಾತನಾಡಿ, 1ರಿಂದ 5 ವರ್ಷದೊಳಗಿನ 19,111 ಮಕ್ಕಳು, 6ರಿಂದ 19 ವರ್ಷದೊಳಗಿನ 49,468 ಮಕ್ಕಳು ಹಾಗೂ ಶಾಲೆಯಿಂದ ಹೊರಗುಳಿದ 798 ಮಕ್ಕಳಿಗೆ ಉಚಿತ ಅಲ್ಬೆಂಡಜೋಲ್ ಮಾತ್ರೆ ವಿತರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಅಲ್ಬೆಂಡಜೋಲ್ ಮಾತ್ರೆ ಕರುಳಿನಲ್ಲಿರುವ ಜಂತುಹುಳುಗಳನ್ನು ನಿಯಂತ್ರಿಸುವ ಮೂಲಕ ಮಕ್ಕಳಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆ ತಡೆಗಟ್ಟಲು ಸಹಕಾರಿಯಾಗುತ್ತದೆ. ಇದರಿಂದ ಮಕ್ಕಳ ದೈಹಿಕ ಬೆಳವಣಿಗೆ ಹಾಗೂ ಕಲಿಕಾ ಸಾಮರ್ಥ್ಯ ಸುಧಾರಿಸಲು ನೆರವಾಗುತ್ತದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಾಲೂಕು ಪಂಚಾಯಿತಿ, ಪುರಸಭೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾಲೇಜುಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮನ್ವಯದಿಂದ ಕಾರ್ಯನಿರ್ವಹಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಜಂತುಹುಳು ಸೋಂಕು ತಡೆಗಟ್ಟಲು ಸ್ವಚ್ಛತೆ ಕಾಪಾಡುವುದು, ಶುದ್ಧ ನೀರು ಕುಡಿಯುವುದು ಹಾಗೂ ಊಟಕ್ಕೂ ಮುನ್ನ ಮತ್ತು ಶೌಚಾಲಯ ಬಳಕೆಯ ನಂತರ ಕೈಗಳನ್ನು ಸರಿಯಾಗಿ ತೊಳೆಯುವ ಅಭ್ಯಾಸ ಬೆಳೆಸಿಕೊಳ್ಳುವಂತೆ ಮಕ್ಕಳಿಗೆ ಹಾಗೂ ಪೋಷಕರಿಗೆ ಜಾಗೃತಿ ಮೂಡಿಸಲು ಸೂಚಿಸಲಾಯಿತು.
ಆರೋಗ್ಯಕರ ಮಕ್ಕಳೇ ಸಮಾಜದ ಬಲಿಷ್ಠ ಅಡಿಪಾಯವಾಗಿದ್ದು, ಪೋಷಕರು ತಮ್ಮ ಮಕ್ಕಳಿಗೆ ಆರೋಗ್ಯ ಇಲಾಖೆಯಿಂದ ವಿತರಿಸಲಾಗುವ ಮಾತ್ರೆಯನ್ನು ತಪ್ಪದೇ ನೀಡುವ ಮೂಲಕ ಜಂತುಹುಳು ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದರು.






