Vijayanagara | ಮಕ್ಕಳ ಸುರಕ್ಷತೆ, ಹಕ್ಕುಗಳ ರಕ್ಷಣೆ ಕುರಿತು ಜಾಗೃತಿ ಅಗತ್ಯ: ನ್ಯಾ.ಎನ್.ಸುಬ್ರಮಣ್ಯ

ವಿಜಯನಗರ (ಹೊಸಪೇಟೆ) : ಮಕ್ಕಳ ಸುರಕ್ಷತೆ, ಹಕ್ಕುಗಳ ರಕ್ಷಣೆ ಹಾಗೂ ಸಂಬಂಧಿತ ಕಾನೂನುಗಳ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಪ್ರಧಾನ ಹಿರಿಯ ಸಿವಿಲ್ ಮತ್ತು ಸಿಜೆಎಂ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್. ಸುಬ್ರಮಣ್ಯ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ವಿಶೇಷ ಬಾಲಾಪರಾಧ ಪೊಲೀಸ್ ಘಟಕಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ‘ಸುರಕ್ಷಿತ ಬಚ್ಪನ್ ಅಭಿಯಾನ’ದ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಲ್ಲಿ ಸಹಜವಾಗಿ ಕುತೂಹಲ ಹೆಚ್ಚಿರುತ್ತದೆ. ಈ ವಯಸ್ಸಿನಲ್ಲಿ ಶಿಕ್ಷಣ, ವ್ಯಕ್ತಿತ್ವ ವಿಕಸನ ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ಹೆಚ್ಚಿನ ಗಮನಹರಿಸಬೇಕು ಎಂದು ಹೇಳಿದರು. ಶಿಕ್ಷಣವು ಉನ್ನತ ಸ್ಥಾನಮಾನ ಗಳಿಸುವುದರ ಜೊತೆಗೆ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿರುವ ಉದ್ದೇಶ ಸಾರ್ಥಕವಾಗುವಂತೆ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಗಮನಹರಿಸಿ, ಉತ್ತಮ ಹಾದಿಯಲ್ಲಿ ಸಾಗಬೇಕು ಎಂದು ಸಲಹೆ ನೀಡಿದರು.
ಶಾಲೆಗೆ ಬರುವಾಗ ಅಥವಾ ಹೋಗುವಾಗ ಯಾರಾದರೂ ತೊಂದರೆ ನೀಡಿದರೆ, ಹಿಂಬಾಲಿಸಿದರೆ ಅಥವಾ ಅನುಚಿತವಾಗಿ ವರ್ತಿಸಿದರೆ ಮಕ್ಕಳು ಭಯಪಡದೆ ಶಿಕ್ಷಕರು, ಪೋಷಕರು, ಪೊಲೀಸ್ ಇಲಾಖೆ ಅಥವಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಮಾಹಿತಿ ನೀಡಿ ದೂರು ಸಲ್ಲಿಸಬೇಕು. ಇಂತಹ ಘಟನೆಗಳನ್ನು ಸಮಾಜದ ಭಯದಿಂದ ಮುಚ್ಚಿಡಬಾರದು. ಸಮಸ್ಯೆಗಳನ್ನು ಮರೆಮಾಚುವುದರಿಂದ ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ಎಚ್ಚರಿಸಿದರು.
ಮಕ್ಕಳು ತಮ್ಮ ಹಕ್ಕುಗಳು, ಸಂಬಂಧಿತ ಕಾನೂನುಗಳು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಕುರಿತು ಅರಿವು ಬೆಳೆಸಿಕೊಳ್ಳಬೇಕು. ಕಾನೂನು ಜಾಗೃತಿಯೊಂದಿಗೆ ಉತ್ತಮ ಶಿಕ್ಷಣ ಪಡೆದು ಜವಾಬ್ದಾರಿಯುತ ನಾಗರಿಕರಾಗಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.






