Vijayanagara | ನೇಪಾಳ ಪ್ರವಾಹ: ನಾಪತ್ತೆಯಾದವರ ಮಾಹಿತಿ ನೀಡಲು ಜಿಲ್ಲಾಡಳಿತ ಮನವಿ

ವಿಜಯನಗರ (ಹೊಸಪೇಟೆ), ಆ.27: ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರಕೃತಿ ವಿಕೋಪ ಹಾಗೂ ದಿಢೀರ್ ಪ್ರವಾಹ (ಫ್ಲ್ಯಾಶ್ ಫ್ಲಡ್) ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಯಾವುದೇ ಪ್ರವಾಸಿಗರು ಅಥವಾ ನಾಗರಿಕರು ನಾಪತ್ತೆಯಾಗಿದ್ದರೆ ಅಥವಾ ಸಂಪರ್ಕಕ್ಕೆ ಸಿಗದೇ ಇದ್ದಲ್ಲಿ, ಅವರ ವಿವರಗಳನ್ನು ತಕ್ಷಣ ಜಿಲ್ಲಾಡಳಿತಕ್ಕೆ ನೀಡುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮನವಿ ಮಾಡಿದ್ದಾರೆ.
ನೇಪಾಳದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಕುಟುಂಬಸ್ಥರು, ಸ್ನೇಹಿತರು ಅಥವಾ ಪರಿಚಿತರು ನಾಪತ್ತೆಯಾಗಿದ್ದರೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬಹುದು. ನಾಪತ್ತೆಯಾದವರ ವಿವರಗಳನ್ನು ದಾಖಲಿಸಲು ರಾಜ್ಯ ಸರ್ಕಾರ ವಿಶೇಷ ಗೂಗಲ್ ಫಾರ್ಮ್ ವ್ಯವಸ್ಥೆ ಮಾಡಿದ್ದು, ಅದರ ಮೂಲಕವೂ ಮಾಹಿತಿ ಸಲ್ಲಿಸಬಹುದಾಗಿದೆ.
ಸಂಬಂಧಿತರು ಹಾಗೂ ಅವರ ಕುಟುಂಬದವರ ನೆರವಿಗಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಚಿತ ಸಹಾಯವಾಣಿ 1077 ಅಥವಾ 08394-295655 ಸಂಖ್ಯೆಗೆ ಕರೆ ಮಾಡಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದಲ್ಲದೆ, ರಾಜ್ಯ ಸರ್ಕಾರದ ತುರ್ತು ಕಾರ್ಯಾಚರಣೆ ಕೇಂದ್ರದ 080-22253707 ಅಥವಾ 1070 ಟೋಲ್‌ಫ್ರೀ ಸಂಖ್ಯೆಯನ್ನೂ ಸಂಪರ್ಕಿಸಬಹುದು.
ನೇಪಾಳದಲ್ಲಿ ಸಿಲುಕಿರುವ ಭಾರತೀಯರಿಗೆ ತುರ್ತು ನೆರವು ನೀಡಲು ಅಲ್ಲಿನ ಭಾರತೀಯ ರಾಯಭಾರ ಕಚೇರಿಯು +977 9851316807, +977 9709107500 ಹಾಗೂ +977 9810326117 ತುರ್ತು ಕರೆ ಮತ್ತು ವಾಟ್ಸ್ಆಪ್ ಸಂಖ್ಯೆಗಳನ್ನು ಪ್ರಕಟಿಸಿದೆ. ಅಗತ್ಯ ಮಾಹಿತಿ ಹಾಗೂ ತುರ್ತು ನೆರವಿಗಾಗಿ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸುವಂತೆ ಜಿಲ್ಲಾಡಳಿತ ತಿಳಿಸಿದೆ.






