ವಿಜಯನಗರ | ಆರ್‌ಬಿಎಸ್‌ಎಸ್‌ಎನ್ ಗಣಿಗಾರಿಕೆ ಲೀಸ್ ನವೀಕರಣಕ್ಕೆ ವಿರೋಧ: ನೂರಾರು ಕಾರ್ಮಿಕರ ಬದುಕು ಅತಂತ್ರವಾಗುವ ಭೀತಿ

ಹೊಸಪೇಟೆ/ವಿಜಯನಗರ: ಲೀಸ್ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಆರ್‌ಬಿಎಸ್‌ಎಸ್‌ಎನ್ ಖಾಸಗಿ ಮೈನಿಂಗ್ ಕಂಪೆನಿಯ ಗಣಿಗಾರಿಕೆ ಚಟುವಟಿಕೆ ಹಾಗೂ ಲೀಸ್ ನವೀಕರಣ ವಿಚಾರ ಇದೀಗ ಕಾರಿಗ ನೂರು ಭಾಗದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಕಂಪೆನಿ ವಿರುದ್ಧ ಕೆಲವರು ಪ್ರತಿಭಟನೆ ನಡೆಸಿದ ಬೆನ್ನಲ್ಲೇ, ಇದೇ ಗಣಿಗಾರಿಕೆಯನ್ನು ಅವಲಂಬಿಸಿ ಹಲವು ವರ್ಷಗಳಿಂದ ಬದುಕು ಕಟ್ಟಿಕೊಂಡಿರುವ ಕೂಲಿ ಕಾರ್ಮಿಕರು, ಗಣಿ ಕಾರ್ಮಿಕರು ಹಾಗೂ ಸಣ್ಣ ಲಾರಿ ಮಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಾರಿಗನೂರಿನಲ್ಲಿರುವ ಆರ್‌ಬಿಎಸ್‌ಎಸ್‌ಎನ್ ಮೈನಿಂಗ್ ಕಂಪೆನಿ ಕಚೇರಿ ಎದುರು ಸ್ಥಳೀಯರು ಪ್ರತಿಭಟನೆ ನಡೆಸಿ, ಲೀಸ್ ನವೀಕರಣಕ್ಕೆ ವಿರೋಧ ವ್ಯಕ್ತಪಡಿಸಿದರು. ಪ್ರತಿಭಟನಾ ಸ್ಥಳಕ್ಕೆ ಮಾಜಿ ಸಚಿವ ಆನಂದ್ ಸಿಂಗ್ ಭೇಟಿ ನೀಡಿ ಸ್ಥಳೀಯರ ಹೋರಾಟಕ್ಕೆ ಸಾಥ್ ನೀಡಿದರು.
ಈ ವೇಳೆ ಕಂಪೆನಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಆನಂದ್ ಸಿಂಗ್, ಲೀಸ್ ಅವಧಿ ಮುಗಿದಿದ್ದರೂ ಗಣಿಗಾರಿಕೆ ಚಟುವಟಿಕೆ ನಡೆಸುತ್ತಿರುವುದೇಕೆ ಎಂದು ಪ್ರಶ್ನಿಸಿದರು. ಲೀಸ್ ನವೀಕರಣ ಆಗದೇ ಹೇಗೆ ಇಲ್ಲಿ ಕೆಲಸ ಮಾಡುತ್ತೀರಿ, ಲೀಸ್ ಅವಧಿ ಮುಗಿದಿದ್ದರೆ ಕೆಲಸ ಬಂದ್ ಮಾಡಬೇಕು ಎಂದು ಸೂಚಿಸಿದರು.
ನಗರಸಭೆ ವ್ಯಾಪ್ತಿಯ 30 ಎಕರೆ ಸೇರಿದಂತೆ ಒಟ್ಟು ಸುಮಾರು 80 ಎಕರೆ ಪ್ರದೇಶವನ್ನು ಕಂಪೆನಿ ಲೀಸ್‌ಗೆ ಪಡೆದಿದ್ದು, ಕಳೆದ 30ಕ್ಕೂ ಹೆಚ್ಚು ವರ್ಷಗಳಿಂದ ಗಣಿಗಾರಿಕೆ ನಡೆಸಿದೆ. ಇದೀಗ ಲೀಸ್ ಅವಧಿ ಮುಗಿದು ಮೂರು ತಿಂಗಳು ಕಳೆದಿದ್ದು, ಕಂಪೆನಿಗೆ ಯಾವುದೇ ಕಾರಣಕ್ಕೂ ಲೀಸ್ ನವೀಕರಿಸಬಾರದು ಎಂದು ಆನಂದ್ ಸಿಂಗ್ ಹೇಳಿದರು.
ಮಾಜಿ ಸಚಿವರ ನಿಲುವಿಗೆ ಭಿನ್ನವಾಗಿ, ಗಣಿಗಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಸ್ಥಳೀಯರ ಅಭಿಪ್ರಾಯ ಇದೀಗ ಮುನ್ನೆಲೆಗೆ ಬಂದಿದೆ.
‘ನಾವು ಹಲವು ವರ್ಷಗಳಿಂದ ಇದೇ ಕಂಪೆನಿಯ ಗಣಿಗಾರಿಕೆ ಕೆಲಸವನ್ನೇ ಅವಲಂಬಿಸಿಕೊಂಡು ಬದುಕುತ್ತಿದ್ದೇವೆ. ಕೂಲಿ ಕಾರ್ಮಿಕರು, ಗಣಿ ಕಾರ್ಮಿಕರು, ಸಣ್ಣ ಲಾರಿ ಮಾಲಕರು ಸೇರಿದಂತೆ ನೂರಾರು ಕುಟುಂಬಗಳು ನೇರವಾಗಿ ಹಾಗೂ ಪರೋಕ್ಷವಾಗಿ ಈ ಉದ್ಯೋಗವನ್ನು ಅವಲಂಬಿಸಿವೆ. ಏಕಾಏಕಿ ಕಂಪೆನಿಯನ್ನು ಬೇರೆಯವರಿಗೆ ವರ್ಗಾವಣೆ ಮಾಡಿದರೆ ಅಥವಾ ಗಣಿಗಾರಿಕೆ ಸ್ಥಗಿತಗೊಳಿಸಿದರೆ ನಮ್ಮ ಬದುಕು ಅತಂತ್ರವಾಗುತ್ತದೆ. ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
‘ಯಾರು ಕಂಪೆನಿ ನಡೆಸಬೇಕು, ಲೀಸ್ ಯಾರಿಗೆ ನೀಡಬೇಕು ಎಂಬ ವಿಚಾರದಲ್ಲಿ ಸರಕಾರ ಕಾನೂನುಬದ್ಧವಾಗಿ ತೀರ್ಮಾನ ಕೈಗೊಳ್ಳಲಿ. ಆದರೆ ಅದಕ್ಕೂ ಮುನ್ನ ಇಲ್ಲಿ ಕೆಲಸ ಮಾಡುತ್ತಿರುವ ಸ್ಥಳೀಯ ಕಾರ್ಮಿಕರು ಮತ್ತು ಸಣ್ಣ ಲಾರಿ ಮಾಲಕರ ಬದುಕಿನ ಬಗ್ಗೆ ಯೋಚಿಸಬೇಕು. ನಮ್ಮ ಕುಟುಂಬಗಳ ಜೀವನೋಪಾಯಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಯಾವುದೇ ನಿರ್ಧಾರ ಕೈಗೊಳ್ಳಬಾರದು’ ಎಂದು ಅವರು ಮನವಿ ಮಾಡಿದ್ದಾರೆ.
ಮೈನಿಂಗ್ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ನಮ್ಮ ಬದುಕಿನ ಪ್ರಶ್ನೆಯನ್ನು ರಾಜಕೀಯ ವಿಚಾರವನ್ನಾಗಿ ಮಾಡಬೇಡಿ. ಹಲವು ವರ್ಷಗಳಿಂದ ಇಲ್ಲಿ ದುಡಿಯುತ್ತಿರುವ ಕಾರ್ಮಿಕರು ಮತ್ತು ಸಣ್ಣ ಲಾರಿ ಮಾಲಕರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು. ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕಿಂತ ಮೊದಲು ನಮ್ಮ ಬದುಕಿನ ಬಗ್ಗೆ ಗಮನ ಹರಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿ, ಶಾಸಕರು ಸ್ಥಳಕ್ಕೆ ಬರಲಿ
ಮೈನಿಂಗ್ ಲೀಸ್ ಕುರಿತ ವಿವಾದಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಶಾಸಕರು ಕೂಡಲೇ ಕಾರಿಗನೂರಿಗೆ ಭೇಟಿ ನೀಡಿ, ಸ್ಥಳೀಯ ಕಾರ್ಮಿಕರು, ಲಾರಿ ಮಾಲಕರು ಹಾಗೂ ಕಂಪೆನಿ ಪ್ರತಿನಿಧಿಗಳೊಂದಿಗೆ ಚರ್ಚಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.
‘ನಮ್ಮ ಸಮಸ್ಯೆಗಳನ್ನು ನೇರವಾಗಿ ಕೇಳಿ, ನಮಗೆ ಸೂಕ್ತ ಪರಿಹಾರ ನೀಡಬೇಕು. ವರ್ಷಗಳಿಂದ ಇದೇ ಉದ್ಯೋಗವನ್ನು ನಂಬಿಕೊಂಡಿರುವವರ ಬದುಕು ಬೀದಿಗೆ ಬೀಳದಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
ಇದೀಗ ಆರ್‌ಬಿಎಸ್‌ಎಸ್‌ಎನ್ ಕಂಪೆನಿಯ ಲೀಸ್ ನವೀಕರಣ, ಗಣಿಗಾರಿಕೆ ಮುಂದುವರಿಕೆ ಹಾಗೂ ಸ್ಥಳೀಯರ ಉದ್ಯೋಗದ ಭವಿಷ್ಯ ಈ ಮೂರು ವಿಚಾರಗಳು ಒಂದೇ ಸಮಯದಲ್ಲಿ ಮುನ್ನೆಲೆಗೆ ಬಂದಿದ್ದು, ಜಿಲ್ಲಾಡಳಿತ ಯಾವ ರೀತಿಯ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.






