Vijayanagara | ಪಿಂಜಾರ್ ಓಣಿ, ಕೊಂಡನಾಯಕನಹಳ್ಳಿ ಭಾಗ-2 ಸ್ಲಂ ಘೋಷಣೆಗೆ ಆಗ್ರಹ: ನಗರಸಭೆಗೆ ಮನವಿ

ಹೊಸಪೇಟೆ/ವಿಜಯನಗರ: ನಗರದ ಚಿತ್ತವಾಡಗಿ ವ್ಯಾಪ್ತಿಯ ಪಿಂಜಾರ್ ಓಣಿ ಹಾಗೂ ಕೊಂಡನಾಯಕನಹಳ್ಳಿ ಭಾಗ-2 ಪ್ರದೇಶಗಳನ್ನು ಸ್ಲಂ ಎಂದು ಘೋಷಿಸುವಂತೆ ಹಾಗೂ ನಗರ ಕೇಂದ್ರ ಗ್ರಂಥಾಲಯಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ನಾಮಕರಣ ಮಾಡುವಂತೆ ಒತ್ತಾಯಿಸಿ ಸ್ಲಂ ಜನರ ಸಂಘಟನೆ ಕರ್ನಾಟಕ ವಿಜಯನಗರ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ನಗರಸಭೆ ಅಧ್ಯಕ್ಷರು ಹಾಗೂ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಚಿತ್ತವಾಡಗಿಯ ಸರ್ವೆ ನಂಬರ್ 223, 249/1 ಹಾಗೂ ಕೊಂಡನಾಯಕನಹಳ್ಳಿಯ ಸರ್ವೆ ನಂಬರ್ 30ರ ಹಿಸ್ಸಾ-1 ಮತ್ತು 2ರಲ್ಲಿ ಕಳೆದ 40ರಿಂದ 50 ವರ್ಷಗಳಿಂದ ನೂರಾರು ಕುಟುಂಬಗಳು ವಾಸವಾಗಿವೆ. ಈ ಪ್ರದೇಶಗಳು ಸ್ಲಂ ಘೋಷಣೆಗೆ ಅರ್ಹವಾಗಿದ್ದರೂ ಇದುವರೆಗೆ ಅಧಿಕೃತವಾಗಿ ಸ್ಲಂ ಎಂದು ಘೋಷಣೆಯಾಗಿಲ್ಲ ಎಂದು ಸಂಘಟನೆಯ ಪದಾಧಿಕಾರಿಗಳು ಮನವಿಯಲ್ಲಿ ತಿಳಿಸಿದ್ದಾರೆ.
ಸ್ಲಂ ಎಂದು ಘೋಷಣೆಯಾಗದ ಹಿನ್ನೆಲೆಯಲ್ಲಿ ನಿವಾಸಿಗಳಿಗೆ ಹಕ್ಕುಪತ್ರ ಪಡೆಯಲು ಸಾಧ್ಯವಾಗದೆ ಭೂಮಿ ಹಕ್ಕಿನಿಂದ ವಂಚಿತರಾಗಿದ್ದಾರೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಪೂರ್ವಸಿದ್ಧತಾ ಕ್ರಮಗಳನ್ನು ಕೈಗೊಂಡು ಆದಷ್ಟು ಬೇಗ ಈ ಪ್ರದೇಶಗಳನ್ನು ಸ್ಲಂ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ನಗರದ ನಗರ ಕೇಂದ್ರ ಗ್ರಂಥಾಲಯಕ್ಕೆ ‘ಡಾ. ಬಿ.ಆರ್. ಅಂಬೇಡ್ಕರ್ ಗ್ರಂಥಾಲಯ’ ಎಂದು ಮರುನಾಮಕರಣ ಮಾಡುವಂತೆಯೂ ನಗರಸಭೆಗೆ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್ ಹಾಗೂ ಶಿವಕುಮಾರ್, ಆಗಸ್ಟ್ 25ರಂದು ನಗರಸಭೆಯ ಸಾಮಾನ್ಯ ಸಭೆ ನಡೆಯಲಿದ್ದು, ಎರಡೂ ವಿಷಯಗಳನ್ನು ಸಭೆಯಲ್ಲಿ ಚರ್ಚೆಗೆ ತಂದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಶ್ಯಾಮ್ ಚೌದರಿ, ಅಧ್ಯಕ್ಷ ಹೆಚ್. ಶೇಷು, ಉಪಾಧ್ಯಕ್ಷರಾದ ತನ್ವೀರ್ ಅಹ್ಮದ್, ರಾಜಭಕ್ತಿ ಬರಕಾತಿ, ವಿ. ಪರಸಪ್ಪ, ಪ್ರಧಾನ ಕಾರ್ಯದರ್ಶಿ ಎನ್. ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಗುತ್ತಿ ಕೈಲಾಸ್, ಮಹಿಳಾ ಘಟಕದ ಅಧ್ಯಕ್ಷೆ ಹುಲಿಗೆಮ್ಮ, ಉಪಾಧ್ಯಕ್ಷೆ ನೂರ್ ಜಹಾನ್, ಲತಾ ನಾಗವೇಣಿ, ದುರ್ಗಮ್ಮ, ಮಾಬುನಿ, ಮುಖಂಡರಾದ ಶೇಕ್ ಮೆಹಬೂಬ್ ಬಾಷಾ, ಪಾಂಡು ನಾಯಕ್, ಮಹಾಭಾಷಾ, ಹೊನ್ನಪ್ಪ, ಪೀರ್ ಸಾಬ್, ಕಾರ್ತಿಕ್, ಕಾಗಿ ಉಮೇಶ್, ಗವಿಸಿದ್ದ ಸೇರಿದಂತೆ ಯುವ ಘಟಕದ ಭರತ್ ಕುಮಾರ್, ಉಮೇಶ್, ಚಿರಂಜೀವಿ, ಶ್ರೀನಿವಾಸ್, ದ್ವಾರಕೀಶ್, ಜೆ.ಬಿ. ರಘು, ಮುಕ್ಕಣ್ಣ, ಕರಿಯಪ್ಪ, ಮಾರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.






