Vijayanagara | ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಯುವಜನರ ಆದ್ಯ ಕರ್ತವ್ಯ: ಡಾ.ಗೋವಿಂದ

ಹೊಸಪೇಟೆ/ವಿಜಯನಗರ: ಐತಿಹಾಸಿಕ ಸ್ಮಾರಕಗಳು ನಮ್ಮ ನಾಡಿನ ಗತವೈಭವ ಮತ್ತು ಸಂಸ್ಕೃತಿಯ ಪ್ರತೀಕಗಳಾಗಿದ್ದು, ಅವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸುವುದು ಪ್ರತಿಯೊಬ್ಬ ಯುವಕನ ಆದ್ಯ ಕರ್ತವ್ಯವಾಗಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಹಿರಿಯ ಶ್ರೇಣಿ ಸಹಾಯಕ ಪ್ರಾಧ್ಯಾಪಕ ಡಾ. ಗೋವಿಂದ ಹೇಳಿದರು.
ನಗರದ ಶ್ರೀ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸರ್ಕಾರದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಮೈಸೂರಿನ ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಕಾಲೇಜಿನ ಇತಿಹಾಸ ವಿಭಾಗದ ಸಹಯೋಗದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ‘ಪರಂಪರಾ ಕೂಟ’ದ ಉದ್ಘಾಟನಾ ಸಮಾರಂಭ ನಡೆಯಿತು. ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಲೆತಲಾಂತರಗಳಿಂದ ರೂಢಿಸಿಕೊಂಡು ಬಂದ ಆಚಾರ-ವಿಚಾರಗಳು, ಸಂಪ್ರದಾಯಗಳು ಹಾಗೂ ಜೀವನಶೈಲಿಯೇ ಪರಂಪರೆಯಾಗಿದೆ. ಯುವಜನರು ಜೀವನದಲ್ಲಿ ವೈಜ್ಞಾನಿಕ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವುದರ ಜತೆಗೆ ನಮ್ಮ ಐತಿಹಾಸಿಕ ಪರಂಪರೆಯ ಮಹತ್ವವನ್ನೂ ಅರಿಯಬೇಕು. ಪ್ರತಿವರ್ಷ ವಿದ್ಯಾರ್ಥಿಗಳನ್ನು ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ಕರೆದೊಯ್ದು, ಅವುಗಳ ಇತಿಹಾಸ ಮತ್ತು ಮಹತ್ವದ ಕುರಿತು ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಕಾಲೇಜಿನ ಇತಿಹಾಸ ವಿಭಾಗ ಮುಂದಿನ ದಿನಗಳಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು. ಅಲ್ಲದೆ, ಸ್ಥಳೀಯ ದೇವಾಲಯಗಳ ಪುರಾಣ ಮತ್ತು ಇತಿಹಾಸದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಶಾಸನ, ವೀರಗಲ್ಲುಗಳ ಸಂರಕ್ಷಣೆಗೆ ಕರೆ :
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹೂವಿನಹಡಗಲಿಯ ಜಿ.ಪಿ. ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಶಂಕರ್ ಜಿ. ಮಾಳೆಕೊಪ್ಪ ಅವರು ತಾವು ಹವ್ಯಾಸವಾಗಿ ಸಂಗ್ರಹಿಸಿರುವ ರಾಜರ ಕಾಲದ ದೇಶೀಯ ಹಾಗೂ ವಿದೇಶಿ ನಾಣ್ಯಗಳು ಮತ್ತು ನೋಟುಗಳನ್ನು ಪ್ರದರ್ಶಿಸಿದರು.
ನಮ್ಮ ಇತಿಹಾಸ ಮತ್ತು ಪರಂಪರೆಯನ್ನು ಉಳಿಸಲು ಯುವಕರು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು. ಗ್ರಾಮಗಳ ಹೊಲಗಳಲ್ಲಿ ಹಾಗೂ ದೇವಾಲಯಗಳ ಸುತ್ತಮುತ್ತ ಕಂಡುಬರುವ ಶಾಸನಗಳು ಮತ್ತು ವೀರಗಲ್ಲುಗಳನ್ನು ನಿರ್ಲಕ್ಷಿಸದೆ ಸಂರಕ್ಷಿಸಬೇಕು. ಅವುಗಳನ್ನು ಇತಿಹಾಸ ತಜ್ಞರ ಗಮನಕ್ಕೆ ತರುವ ಮೂಲಕ ತಮ್ಮ ಊರಿನ ಗತಚರಿತ್ರೆಯನ್ನು ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು.
ನಾಣ್ಯ ಸಂಗ್ರಹಣೆ ತಮ್ಮ ಹವ್ಯಾಸವಾಗಿದ್ದು, ಪರಂಪರಾ ಕೂಟದಲ್ಲಿ ಅವುಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಿದ ಕಾಲೇಜಿನ ಇತಿಹಾಸ ವಿಭಾಗಕ್ಕೆ ಕೃತಜ್ಞತೆ ಸಲ್ಲಿಸಿದರು.
ಇತಿಹಾಸ ಮತ್ತು ಸಾಹಿತ್ಯ ಅವಿನಾಭಾವ ಸಂಬಂಧ :
ಕನ್ನಡ ವಿಭಾಗದ ಮುಖ್ಯಸ್ಥ ಡಾ. ಸಿ. ದೇವಣ್ಣ ಮಾತನಾಡಿ, ಇತಿಹಾಸ ಮತ್ತು ಕನ್ನಡ ಸಾಹಿತ್ಯ ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿವೆ. ಹಿಂದಿನ ಅನೇಕ ರಾಜರು ತಮ್ಮ ಆಸ್ಥಾನದಲ್ಲಿದ್ದ ಕವಿಗಳಿಗೆ ಪ್ರೋತ್ಸಾಹ ನೀಡಿದ ಸಂಗತಿಗಳು ಇತಿಹಾಸದ ಮೂಲಕ ತಿಳಿದುಬರುತ್ತವೆ ಎಂದರು.
ಇತಿಹಾಸ ವಿಭಾಗದ ಮುಖ್ಯಸ್ಥೆ ಡಾ. ವಾಣಿಶ್ರೀ ಪ್ರಾಸ್ತಾವಿಕವಾಗಿ ಮಾತನಾಡಿ, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ಕರೆದೊಯ್ದು, ಅವುಗಳ ರಚನೆ, ವಾಸ್ತುಶೈಲಿ ಮತ್ತು ಮಹತ್ವವನ್ನು ಪರಿಚಯಿಸಲಾಗುವುದು. ಪುರಾತತ್ವ ಇಲಾಖೆಯ ಸೂಚನೆಗಳಂತೆ ಸ್ಮಾರಕಗಳ ಕುರಿತು ವಿಚಾರ ಸಂಕಿರಣ ಹಾಗೂ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಪ್ರಾಚಾರ್ಯ ಟಿ.ಎಚ್.ಎಂ. ದಾರುಕಸ್ವಾಮಿ ಮಾತನಾಡಿ, ನಿರಂತರ ಅಧ್ಯಯನದಿಂದ ಇತಿಹಾಸದ ಆಳವಾದ ಅರಿವು ಪಡೆಯಲು ಸಾಧ್ಯ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇತಿಹಾಸಕ್ಕೆ ಸಂಬಂಧಿಸಿದ ಪ್ರಶ್ನೆಗಳು ಮಹತ್ವ ಪಡೆದಿದ್ದು, ವಿದ್ಯಾರ್ಥಿಗಳು ತಮ್ಮ ಮನೆತನಗಳ ಹಿನ್ನೆಲೆ ಹಾಗೂ ಸ್ಥಳೀಯ ಚರಿತ್ರೆಯ ಬಗ್ಗೆಯೂ ತಿಳಿದುಕೊಳ್ಳಬೇಕು. ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸುವ ಕಾರ್ಯದಲ್ಲಿ ಯುವಜನರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಸ್ಮಾರಕಗಳಿಗೆ ಸಂಬಂಧಿಸಿದ ಫಲಕಗಳು ಮತ್ತು ಭಿತ್ತಿಚಿತ್ರಗಳನ್ನು ಪ್ರದರ್ಶಿಸಲಾಯಿತು. ಇತಿಹಾಸ ಉಪನ್ಯಾಸಕ ಕೃಷ್ಣಮೂರ್ತಿ ಅವರು ವಿದ್ಯಾರ್ಥಿಗಳಿಗಾಗಿ ರಚಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶಿ ಪುಸ್ತಕವನ್ನು ಗಣ್ಯರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಇತಿಹಾಸ ಉಪನ್ಯಾಸಕರಾದ ಡಾ. ಗುರುರಾಜ್, ಗಿರಿಯಪ್ಪ ಜೆ., ಡಾ. ಅಕ್ತರಖಾನುಂ, ಕೃಷ್ಣಮೂರ್ತಿ ಟಿ. ಹಾಗೂ ಬೋರಯ್ಯ ಟಿ. ಉಪಸ್ಥಿತರಿದ್ದರು. ಡಾ. ಬೋರಯ್ಯ ಸ್ವಾಗತಿಸಿದರು. ಡಾ. ವಾಣಿಶ್ರೀ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಕೃಷ್ಣಮೂರ್ತಿ ನಿರೂಪಿಸಿದರು. ಭಾರ್ಗವಿ ಪ್ರಾರ್ಥಿಸಿದರು. ಡಾ. ರಾಘವೇಂದ್ರ ವಂದಿಸಿದರು.






