Vijayanagara | ಸರಕಾರಿ ಶಾಲೆಗಳಲ್ಲಿ ಕಲಿಕೆಗೆ ಹೆಚ್ಚು ಒತ್ತು ನೀಡಿ : ಬಿಇಒ ಲೇಪಾಕ್ಷಪ್ಪ

ಹರಪನಹಳ್ಳಿ/ವಿಜಯನಗರ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕರು ಗುಣಮಟ್ಟದ ಕಲಿಕೆಗೆ ಹೆಚ್ಚಿನ ಒತ್ತು ನೀಡಿ, ದಾಖಲಾತಿ ಹೆಚ್ಚಿಸಲು ಶ್ರಮಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಲೇಪಾಕ್ಷಪ್ಪ ಹೇಳಿದರು.
ನಗರದ ಕುರುಬಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಡ್ತಿ ಹೊಂದಿದ ಶಿಕ್ಷಕರಾದ ಶಿವಶಂಕರ ಹಾಗೂ ಸಿಆರ್‌ಪಿ ಶಿವಪ್ರಕಾಶ ಅವರಿಗೆ ಗುರುವಾರ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಶಾಸಕರು ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಅದಕ್ಕೆ ತಕ್ಕಂತೆ ಶಿಕ್ಷಕರು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಶ್ರಮಿಸಬೇಕು. ದಾಖಲಾತಿ ಗಣನೀಯವಾಗಿ ಕುಸಿದರೆ ಹೆಚ್ಚುವರಿ ಶಿಕ್ಷಕರ ಹುದ್ದೆಗಳು ಬೇರೆಡೆಗೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ನವೆಂಬರ್‌ನಲ್ಲಿ ಪೋಷಕರು–ಶಿಕ್ಷಕರ ಮಹಾಸಭೆ ನಡೆಯಲಿದ್ದು, ಆ ಸಂದರ್ಭದಲ್ಲಿ ಮಕ್ಕಳ ಕಲಿಕೆಯ ಬಗ್ಗೆ ಪೋಷಕರು ಹೆಚ್ಚಿನ ಗಮನ ಹರಿಸುತ್ತಾರೆ. ಆದ್ದರಿಂದ ಸರ್ಕಾರದ ವೇಳಾಪಟ್ಟಿಯಂತೆ ಗುಣಮಟ್ಟದ ಬೋಧನೆ ನೀಡುವುದರ ಜೊತೆಗೆ ದಾಖಲಾತಿ ಹೆಚ್ಚಿಸುವ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶಿಕ್ಷಕರು ಶ್ರಮಿಸಬೇಕು ಎಂದು ಕರೆ ನೀಡಿದರು.
ಅರೆಮಜ್ದಿಗೇರಿ ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ಶಿವಪ್ರಕಾಶ ಮಾತನಾಡಿ, ಕುರುಬಗೇರಿ ಶಾಲೆ ಎಲ್ಲಾ ಕ್ಷೇತ್ರಗಳಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದು, ಆ ಪರಂಪರೆಯನ್ನು ಮುಂದುವರಿಸಬೇಕು ಎಂದು ಸಲಹೆ ನೀಡಿದರು.
ಅಲಗಿಲವಾಡ ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ಶಿವಶಂಕರ ಮಾತನಾಡಿ, ಕುರುಬಗೇರಿ ಶಾಲೆಯಲ್ಲಿ ಕಳೆದ ಆರು ವರ್ಷಗಳ ಸೇವೆ ತಮಗೆ ತೃಪ್ತಿ ನೀಡಿದ್ದು, ಶಿಕ್ಷಕರು ಹಾಗೂ ಪೋಷಕರ ಸಹಕಾರವನ್ನು ಸ್ಮರಿಸಿದರು.
ಬಡ್ತಿ ಮುಖ್ಯ ಶಿಕ್ಷಕಿ ಲಕ್ಷ್ಮಿ ರಂಗಣ್ಣನವರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಸದಸ್ಯ ಉದ್ದಾರ ಗಣೇಶ, ನಿವೃತ್ತ ಶಿಕ್ಷಕ ಹಾಲಪ್ಪ, ಸಿಆರ್‌ಪಿ ಸಲೀಂ, ಶಿಕ್ಷಕರಾದ ಸಾವಿತ್ರಮ್ಮ, ಮಂಗಳಗೌರಮ್ಮ, ಉಮಾದೇವಿ, ರತ್ನಿಬಾಯಿ, ಅತಿಥಿ ಶಿಕ್ಷಕ ಧನಂಜಯ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.






