ವಿಜಯನಗರ | ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ರದ್ದುಗೊಳಿಸಲು ಆಗ್ರಹಿಸಿ ಪ್ರತಿಭಟನೆ

ವಿಜಯನಗರ : ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮರಬ್ಬಿಹಾಳ್ ತಾಂಡ ಮತ್ತು ಮರಬ್ಬಿಹಾಳ್ ಗ್ರಾಮಗಳಲ್ಲಿ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು AIDSO ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಬಾಲ ಕಾರ್ಮಿಕ ಪದ್ಧತಿಯನ್ನು ಕಾನೂನು ಬದ್ಧಗೊಳಿಸುವ ಮತ್ತು 40,000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲ್ಪಡುವ ಕೆಪಿಎಸ್-ಮ್ಯಾಗ್ನೆಟ್ ಯೋಜನೆಯನ್ನು ರದ್ದುಗೊಳಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ವಿಜಯನಗರ ಜಿಲ್ಲಾ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ರವಿಕಿರಣ್ ಜೆ.ಪಿ. ಮಾತನಾಡಿ, ಗ್ರಾಮ ಪಂಚಾಯಿತಿಗೊಂದು ಸರ್ಕಾರಿ ಶಾಲೆ ಎಂಬ ನೆಪದಲ್ಲಿ ಸರ್ಕಾರ 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಮರಬ್ಬಿಹಾಳ್ ತಾಂಡ ಹಾಗೂ ಮರಬ್ಬಿಹಾಳ್ ಈ ಗ್ರಾಮಗಳಲ್ಲೇ ಶಾಲೆ ಇರುವುದರಿಂದ ಇಲ್ಲಿನ ಮಕ್ಕಳು ಓದುತ್ತಿದ್ದಾರೆ. ಈ ಶಾಲೆಗಳು ಉಳಿದರೆ ಮಾತ್ರ ಈ ಮಕ್ಕಳಿಗೆ ಶಿಕ್ಷಣ ಸಿಗುತ್ತದೆ. ಶಾಲೆಗಳನ್ನು ಮುಚ್ಚಿ ಮಕ್ಕಳನ್ನು ದೂರದ ಊರಿಗೆ ಹೋಗಿ ಓದಲು ಒತ್ತಾಯಿಸುವುದು ಖಂಡನೀಯ ಎಂದರು.
ಶಿಕ್ಷಣ ಸಚಿವರು ಒಂದೇ ಒಂದು ಸರ್ಕಾರಿ ಶಾಲೆಯನ್ನೂ ಮುಚ್ಚುವುದಿಲ್ಲ ಎಂದು ಸದನದಲ್ಲಿ ಹೇಳಿದ್ದರೂ, ಖಾಸಗಿ ಶಾಲೆಗಳ ಪರವಾಗಿ ಕೆಲಸ ಮಾಡಲಾಗಿದೆ. 60 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, 21 ಸಾವಿರಕ್ಕೂ ಹೆಚ್ಚು ಕೊಠಡಿಗಳು ದುರಸ್ತಿ ಆಗಬೇಕಿವೆ. ಮೊದಲು ಈ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ AIDSO ಜಿಲ್ಲಾ ಜಂಟಿ ಕಾರ್ಯದರ್ಶಿಯಾದ ಆದಿತ್ಯ, SDMC ಅಧ್ಯಕ್ಷರಾದ ಹುಲುಗಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಹುಲುಗಪ್ಪ, AIDYO ಸದಸ್ಯರಾದ ಶ್ರೀನಿವಾಸ್, ಊರಿನ ಗ್ರಾಮಸ್ಥರು, ಹಿರಿಯರು ಮತ್ತು ನೂರಾರು ವಿದ್ಯಾರ್ಥಿ ಭಾಗವಹಿಸಿದ್ದರು.







