Vijayanagara | ಅಂಬಳಿ ಗ್ರಾಮದಲ್ಲಿ ಪ್ರಜಾಸೇವಾ ಆಂದೋಲನ ಕಾರ್ಯಕ್ರಮ

ಕೊಟ್ಟೂರು (ವಿಜಯನಗರ): ತಾಲೂಕಿನ ಅಂಬಳಿ ಗ್ರಾಮದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಸ್ಥಳದಲ್ಲೇ ಪರಿಹಾರ ಒದಗಿಸುವ ಉದ್ದೇಶದಿಂದ ‘ಪ್ರಜಾಸೇವಾ ಆಂದೋಲನ’ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಗ್ರೇಡ್-2 ತಹಶೀಲ್ದಾರ್ ಪ್ರತಿಭಾ ಎಂ. ಮಾತನಾಡಿ, ಸಾರ್ವಜನಿಕರು ವೈಯಕ್ತಿಕ ಹಾಗೂ ಸಾರ್ವಜನಿಕ ಕೆಲಸಗಳಿಗಾಗಿ ತಾಲೂಕು ಕೇಂದ್ರದ ಕಚೇರಿಗಳಿಗೆ ಅಲೆದಾಡಬೇಕಾಗುತ್ತದೆ. ಆದರೆ ಇಂತಹ ಕಾರ್ಯಕ್ರಮಗಳ ಮೂಲಕ ಇಡೀ ತಾಲೂಕು ಆಡಳಿತವೇ ಗ್ರಾಮಕ್ಕೆ ಆಗಮಿಸುವುದರಿಂದ ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ತಮ್ಮ ಸಮಸ್ಯೆಗಳನ್ನು ತಿಳಿಸಿ ಪರಿಹರಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿ. ಆನಂದಕುಮಾರ್ ಅವರು ಆರ್‌ಡಿಪಿಆರ್ ಇಲಾಖೆಗೆ ಸಂಬಂಧಿಸಿದಂತೆ ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಿ, ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಕಟ್ಟಡದ ಭೌತಿಕ ಸ್ಥಿತಿಗತಿ ಕುರಿತು ದೃಢೀಕರಣ ಪಡೆದು ತೆರವುಗೊಳಿಸಲು ಕ್ರಮ ವಹಿಸಲಾಗುವುದು. ಹಳ್ಳದ ಬಳಿ ನೀರು ಸರಾಗವಾಗಿ ಹರಿದುಹೋಗಲು ಪಂಚಾಯಿತಿ ಪಿಡಿಒ ಮೂಲಕ ಆರ್ಥಿಕ ಸಂಪನ್ಮೂಲ ಪರಿಶೀಲಿಸಿ ಒಂದು ವಾರದೊಳಗೆ ಕ್ರಮ ಕೈಗೊಳ್ಳಲಾಗುವುದು. ಕಳೆದ ಎರಡು ವರ್ಷಗಳಿಂದ ವಾಟರ್‌ಮ್ಯಾನ್‌ಗೆ ಗೌರವಧನ ಪಾವತಿಯಾಗದಿರುವ ಕುರಿತು ಪರಿಶೀಲಿಸಿ ಕೂಡಲೇ ಕ್ರಮ ವಹಿಸಲಾಗುವುದು. ಹಗರಿಹಳ್ಳದ ಬಳಿಯ ಕುಡಿಯುವ ನೀರಿನ ಮೋಟರ್ ದುರಸ್ತಿಯನ್ನು ಎರಡು ದಿನಗಳಲ್ಲಿ ಮಾಡಿಸಲಾಗುವುದು ಎಂದು ತಿಳಿಸಿದರು.
ಮನೆಗಳಿಗಾಗಿ ಸಲ್ಲಿಸಿರುವ ಕೋರಿಕೆಗಳ ಕುರಿತು ಮಾತನಾಡಿದ ಅವರು, ಈಗಾಗಲೇ ಕಂದಾಯ ಇಲಾಖೆಯಿಂದ ನಿವೇಶನ ಗುರುತಿಸಲಾಗಿದೆ. ಸರ್ಕಾರದ ಮಾರ್ಗಸೂಚಿ ಹಾಗೂ ನಿಗದಿತ ಗುರಿಯಂತೆ ಸ್ವೀಕೃತ ಅರ್ಜಿಗಳಲ್ಲಿ ಅರ್ಹ ಫಲಾನುಭವಿಗಳಿಗೆ ಮನೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದರು.
ಗ್ರಾಮದಲ್ಲಿ ಕಸ ವಿಲೇವಾರಿ ವಾಹನ ಪ್ರತಿದಿನ ಆಗಮಿಸಬೇಕು ಹಾಗೂ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು. ಹಡಗಲಿ-ಕೊಟ್ಟೂರು ಮಾರ್ಗದ ಬೆಳಗ್ಗೆ 10 ಗಂಟೆಗೆ ಬರುವ ಸಾರಿಗೆ ಬಸ್‌ನ್ನು ಕುಡುತಿನಮಗ್ಗಿ-ಸಂಗಮೇಶ್ವರ ಗ್ರಾಮದ ಮೂಲಕ ಸಂಚರಿಸುವಂತೆ ಮಾಡಬೇಕು ಎಂದು ರಾಮನಗೌಡ ಮೌಖಿಕವಾಗಿ ಮನವಿ ಸಲ್ಲಿಸಿದರು.
ಕಳೆದ ನಾಲ್ಕೈದು ತಿಂಗಳಿಂದ ಸ್ಥಗಿತಗೊಂಡಿರುವ ವಿವಿಧ ವೇತನಗಳನ್ನು ಮುಂದುವರಿಸುವಂತೆ ಹಾಗೂ ಪಹಣಿ ತಿದ್ದುಪಡಿ ಮಾಡುವಂತೆ ಅರ್ಜಿಗಳು ಸಲ್ಲಿಕೆಯಾದವು. ಕಂದಾಯ ಇಲಾಖೆಗೆ ಸಂಬಂಧಿಸಿದ 12, ಆಹಾರ ಇಲಾಖೆಯ ಒಂದು, ಆರ್‌ಡಿಪಿಆರ್ ಇಲಾಖೆಯ ಮನೆ ಹಾಗೂ ದನದ ಕೊಟ್ಟಿಗೆಗೆ ಸಂಬಂಧಿಸಿದ ಆರು, ಸಾರಿಗೆ ಇಲಾಖೆಯ ಒಂದು ಮತ್ತು ಆರೋಗ್ಯ ಇಲಾಖೆಯ ಒಂದು ಸೇರಿದಂತೆ ಒಟ್ಟು 21 ಅರ್ಜಿಗಳನ್ನು ಸ್ವೀಕರಿಸಲಾಯಿತು.
ಕಾರ್ಯಕ್ರಮದಲ್ಲಿ ಇಂದಿರಾಗಾಂಧಿ ವೃದ್ಧಾಪ್ಯ ವೇತನಕ್ಕೆ ಸಂಬಂಧಿಸಿದ ನಾಲ್ಕು ಹಾಗೂ ವಿಧವಾ ವೇತನಕ್ಕೆ ಸಂಬಂಧಿಸಿದ ಎರಡು ಅರ್ಜಿಗಳಿಗೆ ಮಂಜೂರಾತಿ ನೀಡಲಾಯಿತು. ಫಲಾನುಭವಿಗಳಿಗೆ ಮಂಜೂರಾತಿ ಆದೇಶದ ಪ್ರತಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಪಶುವೈದ್ಯಾಧಿಕಾರಿ ಡಾ. ಚಂದ್ರನಾಯ್ಕ, ವಲಯ ಅರಣ್ಯಾಧಿಕಾರಿ ಪಿ. ಗುಡ್ಡಪ್ಪ, ಎಪಿಎಂಸಿ ಕಾರ್ಯದರ್ಶಿ ಈರಣ್ಣ, ಸಣ್ಣ ನೀರಾವರಿ ಇಲಾಖೆಯ ಎಇಇ ಜಗದೀಶ್ ಕೆ., ನಿರ್ಮಿತಿ ಕೇಂದ್ರದ ಮಂಜುನಾಥ, ಸಮಾಜ ಕಲ್ಯಾಣ ಇಲಾಖೆಯ ಶಿವಕವಿ ಸಿದ್ದೇಶ್, ಪಿ.ಜಿ. ಅಡಿವೆಯ್ಯನವರ್, ರೇಷ್ಮೆ ನಿರೀಕ್ಷಕ ನರೇಶ್ ಎನ್., ಸಹಾಯಕ ತೋಟಗಾರಿಕೆ ಅಧಿಕಾರಿ ಶಿವಕುಮಾರ್, ಬಿ. ಬಸವನಗೌಡ, ಕೆಎಸ್‌ಆರ್‌ಟಿಸಿ ಕಂಟ್ರೋಲರ್ ಜಹಂಗೀರ್, ಪೊಲೀಸ್ ಇಲಾಖೆಯ ಎಂ.ಎಂ. ಬಸವರಾಜ, ಶ್ರೀಧರ ಕೆ., ಉಪತಹಶೀಲ್ದಾರ್ ಅನ್ನದಾನೇಶ್ ಬಿ. ಪತ್ತಾರ್, ಕಂದಾಯ ನಿರೀಕ್ಷಕ ಹಾಲಸ್ವಾಮಿ, ಪಿಡಿಒ ಮಾಧವಿ, ಗ್ರಾಮ ಆಡಳಿತ ಅಧಿಕಾರಿ ಮಂಗಳ ಮುದೇನೂರು, ಆಹಾರ ನಿರೀಕ್ಷಕಿ ಕಮಲಮ್ಮ, ಸಿಆರ್‌ಪಿ ಟಿ. ಕರಿಬಸವರಾಜ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು. ಸಿ.ಮ. ಗುರುಬಸವರಾಜ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.






