Vijayanagara | ನೀರನ್ನು ಮುಂದಿನ ಪೀಳಿಗೆಗೆ ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿ : ಜಿ.ಕೃಷ್ಣಮೂರ್ತಿ

ಕೂಡ್ಲಿಗಿ/ವಿಜಯನಗರ: ಪ್ರಕೃತಿದತ್ತವಾಗಿ ದೊರೆತಿರುವ ನೀರಿನ ಸಂಪನ್ಮೂಲವನ್ನು ಮುಂದಿನ ಪೀಳಿಗೆಗೆ ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕೇಂದ್ರೀಯ ಅಂತರ್ಜಲ ಮಂಡಳಿಯ ಪ್ರಾದೇಶಿಕ ನಿರ್ದೇಶಕ ಜಿ. ಕೃಷ್ಣಮೂರ್ತಿ ಹೇಳಿದರು.
ಭಾನುವಾರ ಕಾನ ಹೊಸಹಳ್ಳಿಯ ವಿದ್ಯಾನಿಕೇತನ ಶಾಲೆಯಲ್ಲಿ ಆಯೋಜಿಸಿದ್ದ ಅಂತರ್ಜಲ ಸಂರಕ್ಷಣೆ ಕುರಿತ ಸಾರ್ವಜನಿಕ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅರಣ್ಯ, ಪರಿಸರ ಮತ್ತು ಖನಿಜ ಸಂಪತ್ತಿನ ನಿರಂತರ ನಾಶದಿಂದ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದು, ಅಂತರ್ಜಲ ಮಟ್ಟವೂ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ. ಪರಿಣಾಮವಾಗಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಹವಾಮಾನ ವೈಪರೀತ್ಯಗಳ ಹಿನ್ನೆಲೆಯಲ್ಲಿ ಸೀಮಿತ ಅಂತರ್ಜಲ ಸಂಪನ್ಮೂಲವನ್ನು ಸಮರ್ಪಕವಾಗಿ ಮತ್ತು ಜವಾಬ್ದಾರಿಯುತವಾಗಿ ಬಳಸುವ ಅಗತ್ಯವಿದೆ ಎಂದು ಅವರು ಒತ್ತಿಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಜಿ. ದವಿತ್ತುರಾಜ್ ಕಾರ್ಯಕ್ರಮದ ಉದ್ದೇಶ ಹಾಗೂ ಗುರಿಗಳನ್ನು ವಿವರಿಸಿದರು. ಡಾ. ಬೇಬಿ ಶ್ವೇತಾ ಅವರು ಕೂಡ್ಲಿಗಿ ತಾಲೂಕಿನ ಅಂತರ್ಜಲ ಸ್ಥಿತಿ ಹಾಗೂ ಸಂರಕ್ಷಣಾ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ಭೂವಿಜ್ಞಾನಿ ವಿ. ಬಸಂತ್, ಡಾ. ದೇವರಾಜ್ ರೆಡ್ಡಿ, ಮಹೇಶ ದೊಡ್ಡಮನಿ, ಡಾ. ಪುನೀತ್ ರಾಜ್ ಸೇರಿದಂತೆ ರೈತರು, ಗ್ರಾಮ ಪಂಚಾಯಿತಿ ಪ್ರತಿನಿಧಿಗಳು, ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘದ ಸದಸ್ಯರು, ವಾಟರ್‌ಮ್ಯಾನ್‌ಗಳು ಹಾಗೂ ವಿವಿಧ ಇಲಾಖೆಗಳ ಸಾವಿರಾರು ಮಂದಿ ಭಾಗವಹಿಸಿದ್ದರು.
ಅಂತರ್ಜಲ ಸಂರಕ್ಷಣೆಗೆ ಸಾಮೂಹಿಕ ಪ್ರತಿಜ್ಞೆಯ ಅಗತ್ಯವಿದೆ ಎಂಬ ಅಭಿಪ್ರಾಯವನ್ನು ಎಲ್ಲರೂ ವ್ಯಕ್ತಪಡಿಸಿದರು. “ನೀರು ಉಳಿಸೋಣ – ಜೀವ ಉಳಿಸೋಣ” ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.






