Vijayanagara | ಪಟಾಕಿ ಖರೀದಿಗೆಂದು ಪಾಲಕರು ನೀಡಿದ ಹಣವನ್ನು ಅನಾಥಾಶ್ರಮಕ್ಕೆ ದೇಣಿಗೆ ನೀಡಿದ ವಿದ್ಯಾರ್ಥಿಗಳು

ಕೊಟ್ಟೂರು (ವಿಜಯನಗರ): ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಖರೀದಿಸಲು ಪಾಲಕರು ನೀಡಿದ್ದ ಹಣವನ್ನು ಖರ್ಚು ಮಾಡದೆ, ಅದನ್ನು ಸಂಗ್ರಹಿಸಿ ಅನಾಥಾಶ್ರಮಕ್ಕೆ ದೇಣಿಗೆಯಾಗಿ ನೀಡುವ ಮೂಲಕ ಸಂಡೂರಿನ ನಾನಾವಾಟೆ ಶಾಲೆಯ ವಿದ್ಯಾರ್ಥಿಗಳು ಮಾನವೀಯತೆ ಮೆರೆದಿದ್ದಾರೆ.
ಪಟಾಕಿ ಸಿಡಿಸಿ ಹಣ ವ್ಯರ್ಥ ಮಾಡುವ ಬದಲು, ಅದೇ ಹಣವನ್ನು ಸಮಾಜದ ಒಳಿತಿಗಾಗಿ ಬಳಸಬೇಕೆಂಬ ಸದುದ್ದೇಶದಿಂದ ವಿದ್ಯಾರ್ಥಿಗಳು ಪಾಲಕರು ನೀಡಿದ್ದ ಹಣವನ್ನು ಒಟ್ಟುಗೂಡಿಸಿದ್ದಾರೆ. ಬಳಿಕ ಕೊಟ್ಟೂರಿನ ಉತ್ತಂಗಿ ಹಿರೇಮಠದ ರುದ್ರಮ್ಮ ಕೊಟ್ರಸ್ವಾಮಿ ಅನಾಥಾಶ್ರಮಕ್ಕೆ ದೇಣಿಗೆಯಾಗಿ ನೀಡಿದ್ದಾರೆ.
ಈ ಮೂಲಕ ಅನಾಥಾಶ್ರಮದ ನಿವಾಸಿಗಳಿಗೆ ನೆರವಾಗುವುದರೊಂದಿಗೆ ವಿದ್ಯಾರ್ಥಿಗಳು ದೀಪಾವಳಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಸೇವಾ ಮನೋಭಾವ, ಪರೋಪಕಾರ ಮತ್ತು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವ ವಿದ್ಯಾರ್ಥಿಗಳ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ಗಿರೀಶ್ ಕೊಟ್ರೇಶ್ ಉಪಸ್ಥಿತರಿದ್ದರು.




