Vijayanagara | ಉಜ್ಜನಿಯಲ್ಲಿ ಹುಣಸೆ ನಾಡು ಉತ್ಸವ–2026; ಎನ್.ಟಿ. ಬೊಮ್ಮಣ್ಣ ಸ್ಮರಣೋತ್ಸವ

ಕೊಟ್ಟೂರು (ವಿಜಯನಗರ): ತಾಲೂಕಿನ ಉಜ್ಜನಿಯಲ್ಲಿ ಹುಣಸೆ ನಾಡು ಉತ್ಸವ–2026 ಹಾಗೂ ದಿವಂಗತ ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ ಅವರ ಸ್ಮರಣೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅವರು, ತಮ್ಮ ತಂದೆಯವರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಹಿರಿಯರು, ಸ್ನೇಹಿತರು ಹಾಗೂ ಅಭಿಮಾನಿಗಳನ್ನು ಒಂದೇ ವೇದಿಕೆಯಲ್ಲಿ ಕಾಣುವುದು ಮನಸ್ಸಿಗೆ ಅಪಾರ ಸಂತೋಷ ತಂದಿದೆ ಎಂದರು.
ಕೂಡ್ಲಿಗಿ ರಂಗಭೂಮಿ, ಜನಪದ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಂಪರೆಯ ತವರಾಗಿದೆ. ಈ ನಾಡಿನ ಭಾಷೆ, ಕಲೆ ಮತ್ತು ಕಲಾವಿದರ ಪ್ರತಿಭೆಯನ್ನು ಗೌರವಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಮೂಡಬಿದಿರೆಯ ಆಳ್ವಾಸ್ ಪ್ರತಿಷ್ಠಾನದ ಪ್ರತಿಭಾವಂತ ಕಲಾವಿದರು ತಮ್ಮ ಅದ್ಭುತ ಪ್ರದರ್ಶನಗಳ ಮೂಲಕ ಉಜ್ಜನಿಯ ಜನತೆಗೆ ಕಲಾ ವೈಭವದ ರಸದೌತಣ ಉಣಬಡಿಸಿದರು. ಕಲಾವಿದರ ಪ್ರತಿಭೆಗೆ ಪ್ರೋತ್ಸಾಹ ನೀಡುವುದು, ಕಲಾಸೇವೆಗೆ ಗೌರವ ಸಲ್ಲಿಸುವುದು ಹಾಗೂ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಈ ಉತ್ಸವದ ಆಶಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿದ್ದಲಿಂಗ ರಾಜದೇಶಿ ಕೇಂದ್ರ ಮಹಾಜಗದ್ಗುರುಗಳು, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಆನಂತ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇಲೂರು, ನಾಗರಕಟ್ಟೆ ರಾಜಣ್ಣ, ಕಲ್ಲುಕಂಬ ಪಂಪಾಪತಿ ಸೇರಿದಂತೆ ಗಣ್ಯರು, ಹಿರಿಯ ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.






