Vijayanagara | ರೈಲ್ವೆ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರು ಅಪ್ರಾಪ್ತ ಬಾಲಕರ ರಕ್ಷಣೆ

ಹೊಸಪೇಟೆ/ವಿಜಯನಗರ, ಆ.3: ಜಿಲ್ಲೆಯ ರೈಲ್ವೆ ನಿಲ್ದಾಣದ ಸಮೀಪ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರು ಅಪ್ರಾಪ್ತ ಬಾಲಕರನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಅಕ್ಕಪಡೆ ತಂಡ ರಕ್ಷಿಸಿ, ಅಗತ್ಯ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಪೋಷಕರಿಗೆ ಸುರಕ್ಷಿತವಾಗಿ ಹಸ್ತಾಂತರಿಸಿದ ಘಟನೆ ಸೋಮವಾರ ನಡೆದಿದೆ.
ರೈಲ್ವೆ ಪೊಲೀಸ್ ಠಾಣೆಯಿಂದ ಮೂವರು ಅಪ್ರಾಪ್ತ ಬಾಲಕರು ರೈಲ್ವೆ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿರುವ ಕುರಿತು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ಬಂದಿತ್ತು. ತಕ್ಷಣವೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಹಾಗೂ ಅಕ್ಕಪಡೆ ತಂಡ ಸ್ಥಳಕ್ಕೆ ತೆರಳಿ ಮಕ್ಕಳನ್ನು ಸುರಕ್ಷಿತವಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿಗೆ ಕರೆತಂದರು. ವಿಚಾರಣೆ ವೇಳೆ ಮಕ್ಕಳು ಮನೆಯಲ್ಲಿ ಯಾರಿಗೂ ತಿಳಿಸದೆ ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳುವ ಉದ್ದೇಶದಿಂದ ಮನೆ ಬಿಟ್ಟು ಬಂದಿದ್ದು, ಮಾರ್ಗಮಧ್ಯೆ ದಾರಿ ತಪ್ಪಿ ರೈಲ್ವೆ ನಿಲ್ದಾಣದ ಬಳಿ ತಲುಪಿರುವುದಾಗಿ ತಿಳಿಸಿದ್ದಾರೆ.
ರಕ್ಷಿಸಲ್ಪಟ್ಟ ಮಕ್ಕಳಲ್ಲಿ ಸಂಡೂರು ತಾಲೂಕಿನ ಕುರೇಗುಪ್ಪ ಗ್ರಾಮದ ಬಸವರಾಜ್–ಹೊನ್ನೂರಮ್ಮ ದಂಪತಿಯ ಪುತ್ರ ಹಾಗೂ 8ನೇ ತರಗತಿ ವಿದ್ಯಾರ್ಥಿ ಶಂಕರ, ಗದಗ ಜಿಲ್ಲೆಯ ಗವಿಸಿದ್ದೇಶ್ವರ ಮಠ ವಸತಿ ನಿಲಯದಲ್ಲಿ 3ನೇ ತರಗತಿ ವ್ಯಾಸಂಗ ಮಾಡುತ್ತಿರುವ ರಾಜಶೇಖರ್–ಕವಿತಾ ದಂಪತಿಯ ಪುತ್ರ ಯಶ್ವಂತ್ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಇಂಗ್ಲಿಷ್ ಮೀಡಿಯಂ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಚಿದಾನಂದ–ನೀಲಮ್ಮ ದಂಪತಿಯ ಪುತ್ರ ಹರ್ಷ ಸೇರಿದ್ದಾರೆ.
ಬಳಿಕ ಮಕ್ಕಳ ಪೋಷಕರಿಗೆ ದೂರವಾಣಿ ಮೂಲಕ ಮಾಹಿತಿ ನೀಡಲಾಯಿತು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿಗೆ ಆಗಮಿಸಿದ ಪೋಷಕರಿಗೆ ಮಕ್ಕಳ ಬಗ್ಗೆ ಹೆಚ್ಚಿನ ಜವಾಬ್ದಾರಿಯಿಂದ ಕಾಳಜಿ ವಹಿಸುವಂತೆ ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳು ಸೂಚನೆ ನೀಡಿದರು. ಈ ಸಂಬಂಧ ಪೋಷಕರಿಂದ ಲಿಖಿತ ಹೇಳಿಕೆಯನ್ನೂ ಪಡೆಯಲಾಯಿತು.
ಯಶ್ವಂತ್ ಅವರ ತಂದೆ ರಾಜಶೇಖರ್ ಅವರು ಮೂವರು ಮಕ್ಕಳ ಜವಾಬ್ದಾರಿಯನ್ನು ವಹಿಸಿಕೊಂಡು ತಮ್ಮೊಂದಿಗೆ ಕರೆದುಕೊಂಡು ಹೋಗುವುದಾಗಿ ಒಪ್ಪಿಗೆ ಸೂಚಿಸಿದರು. ಜೊತೆಗೆ ಆಗಸ್ಟ್ 4ರಂದು ಬೆಳಿಗ್ಗೆ ಬಳ್ಳಾರಿಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿಗೆ ಮಕ್ಕಳೊಂದಿಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಲಾಯಿತು.
ಅಗತ್ಯ ಕಾನೂನು ಹಾಗೂ ರಕ್ಷಣಾ ಕ್ರಮಗಳನ್ನು ಪೂರ್ಣಗೊಳಿಸಿದ ಬಳಿಕ ಮೂವರು ಮಕ್ಕಳನ್ನು ಸುರಕ್ಷಿತವಾಗಿ ಅವರ ಪೋಷಕರೊಂದಿಗೆ ಮನೆಗೆ ಕಳುಹಿಸಲಾಯಿತು.
ಈ ಘಟನೆ ಮಕ್ಕಳ ಮೇಲೆ ಪೋಷಕರು ನಿರಂತರ ನಿಗಾ ಮತ್ತು ಕಾಳಜಿ ವಹಿಸುವ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.






