Vijayanagara | ತಂಬಾಕು ನಿಯಂತ್ರಣ ಕೋಶದ ಪ್ರಗತಿ ಪರಿಶೀಲನಾ ಸಭೆ
7 ದಿನಗಳಲ್ಲಿ ಶೇ.100ರಷ್ಟು ನೋಂದಣಿ ಪೂರ್ಣಗೊಳಿಸಿ : ಗರಿಮಾ ಪನ್ವಾರ್

ವಿಜಯನಗರ (ಹೊಸಪೇಟೆ), ಸೆ. 28: ಜಿಲ್ಲೆಯ ಎಲ್ಲಾ ಶಾಲೆಗಳು ಮುಂದಿನ ಏಳು ದಿನಗಳೊಳಗೆ ತಂಬಾಕು ಮುಕ್ತ ಶಿಕ್ಷಣ ಸಂಸ್ಥೆ (Tobacco Free Educational Institution – TFEI) ಆ್ಯಪ್‌ನಲ್ಲಿ ಶೇ.100ರಷ್ಟು ನೋಂದಣಿ ಪೂರ್ಣಗೊಳಿಸಬೇಕು. ಗಡುವಿನೊಳಗೆ ನೋಂದಣಿ ಮಾಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಮುಖ್ಯ ಶಿಕ್ಷಕರ ವಿರುದ್ಧ ನೋಟಿಸ್ ಜಾರಿಗೊಳಿಸಿ, ಅಗತ್ಯವಿದ್ದರೆ ಇಂಕ್ರಿಮೆಂಟ್ ತಡೆಹಿಡಿಯುವ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ತಂಬಾಕು ನಿಯಂತ್ರಣ ಕೋಶದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 1,612 ಶಾಲೆಗಳ ಪೈಕಿ ಕೇವಲ 62 ಶಾಲೆಗಳು ಮಾತ್ರ TFEI ಆ್ಯಪ್‌ನಲ್ಲಿ ನೋಂದಣಿಯಾಗಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಮೂರು ವರ್ಷಗಳಿಂದ ನೋಂದಣಿಗೆ ಸೂಚನೆ ನೀಡುತ್ತಿದ್ದರೂ ನಿರೀಕ್ಷಿತ ಪ್ರಗತಿ ಸಾಧಿಸದಿರುವುದು ಅಧಿಕಾರಿಗಳು ಹಾಗೂ ಶಾಲಾ ಮುಖ್ಯಸ್ಥರ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಮುಖ್ಯ ಶಿಕ್ಷಕರು ನೋಂದಣಿ ಪ್ರಕ್ರಿಯೆಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಿ, ಯಾವುದೇ ಕಾರಣಕ್ಕೂ ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ನಿರ್ಲಕ್ಷ್ಯ ವಹಿಸಿದರೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಮುಖ್ಯ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದರ ಜೊತೆಗೆ ಇಂಕ್ರಿಮೆಂಟ್ ತಡೆಹಿಡಿಯುವ ಕ್ರಮವನ್ನೂ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿ, ಶಾಲಾ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ತಂಬಾಕು ಮುಕ್ತವಾಗಿಡುವುದು ಹಾಗೂ ವಿದ್ಯಾರ್ಥಿಗಳಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದು TFEI ನೋಂದಣಿಯ ಪ್ರಮುಖ ಉದ್ದೇಶವಾಗಿದೆ. ಹೀಗಾಗಿ ಜಿಲ್ಲೆಯ ಎಲ್ಲ ಶಾಲೆಗಳು ನಿಗದಿತ ಗಡುವಿನೊಳಗೆ ನೋಂದಣಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಕೋಟ್ಪಾ ಕಾಯ್ದೆ ಉಲ್ಲಂಘನೆಗೆ 3.95 ಲಕ್ಷ ರೂ. ದಂಡ :
ತಹಶೀಲ್ದಾರ್ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕೋಟ್ಪಾ ಕಾಯ್ದೆ ಉಲ್ಲಂಘನೆಗಳ ವಿರುದ್ಧ ಜಂಟಿ ದಾಳಿ ನಡೆಸಿ ಒಟ್ಟು 3.95 ಲಕ್ಷ ರೂ. ದಂಡ ವಿಧಿಸಿ ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಗ್ರಾಮೀಣ ಪ್ರದೇಶಗಳಲ್ಲಿಯೂ ತಂಬಾಕು ನಿಯಂತ್ರಣಕ್ಕೆ ಹೆಚ್ಚಿನ ನಿಗಾ ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಶಾಲೆಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ನಿರಂತರ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ವೆಂಡರ್ ಲೈಸೆನ್ಸ್ ಕಡ್ಡಾಯ :
ತಂಬಾಕು ಉತ್ಪನ್ನಗಳ ಮಾರಾಟಗಾರರು ನಿಯಮಾನುಸಾರ 500 ರೂ. ಶುಲ್ಕ ಪಾವತಿಸಿ ಐದು ವರ್ಷಗಳ ಅವಧಿಗೆ ವೆಂಡರ್ ಲೈಸೆನ್ಸ್ ಪಡೆಯುವುದು ಕಡ್ಡಾಯವಾಗಿದೆ. ಎಲ್ಲ ಸ್ಥಳೀಯ ಸಂಸ್ಥೆಗಳು ವ್ಯಾಪಾರಿಗಳಿಗೆ ಅಗತ್ಯ ಮಾಹಿತಿ ನೀಡಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಲಾಯಿತು.
ಸಮೀಕ್ಷೆ ಹಾಗೂ ಮೌಲ್ಯಮಾಪನದ ಬಳಿಕ ಅರ್ಹ ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮಗಳು ಎಂದು ಘೋಷಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ. ಲಿಂಗರಾಜು, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಜಂಬಯ್ಯ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಷಣ್ಮುಖನಾಯ್ಕ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಭಾಸ್ಕರ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ರಾಧಿಕಾರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.






