ವಿಜಯನಗರ: ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ತರಬೇತಿ ಕಾರ್ಯಗಾರ

ವಿಜಯನಗರ (ಹೊಸಪೇಟೆ): ಸಾರ್ವಜನಿಕರಿಗೆ ಮಾಹಿತಿ ಹಕ್ಕು ಎಂಬುದು ಸಾಂವಿಧಾನಿಕ ಬದ್ದವಾಗಿ ದೊರೆತ ಕಾನೂನು ಹಕ್ಕು. ಕಾಯ್ದೆಯ ಜಾರಿಯಾಗಿ 20 ವರ್ಷ ಗತಿಸಿದೆ. ಈ ಕಾಯ್ದೆ 2005ರಲ್ಲಿ ಜಾರಿಯಾದರೂ ಇಂದಿಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಕೆಲ ಮಾಹಿತಿ ಕೊರತೆ ಇದೆ. ಆದ್ದರಿಂದ ಅರ್ಜಿ ವಿಲೇವಾರಿ ಮಾಡಲು ವಿವಿಧ ರೀತಿ ಸಂಕಷ್ಟ ಎದುರಿಸುತ್ತಿದ್ದಾರೆ. ಅದಕ್ಕಾಗಿಯೇ ರಾಜ್ಯಾದಂದ್ಯಂತ ಜಾಗೃತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ. ಅದರಂತೆ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದು, ಇದು 5ನೇ ಜಿಲ್ಲೆಯಾಗಿದೆ ಎಂದು ಕಲಬುರಗಿ ಪೀಠದ ಆಯುಕ್ತ ವೆಂಕಟಸಿಂಗ್ ಹೇಳಿದರು.
ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಆಯೀಜಿಸಲಾಗಿದ್ದ ಜಿಲ್ಲಾ, ತಾಲ್ಲೂಕು ಮತ್ತು ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆ ಕುರಿತು ಒಂದು ದಿನದ ಕಾರ್ಯಗಾರ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಂದು ಸರ್ಕಾರಿ ಇಲಾಖೆ ಹಾಗೂ ಕಚೇರಿಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಸಾರ್ವಜನಿಕರು ಕೇಳುವ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು. ಆಡಳಿತದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ಮತ್ತು ಭ್ರಷ್ಟಾಚಾರವನ್ನು ನಿಯಂತ್ರಿಸುವ ಉದ್ದೇಶದಿಂದ ಸರ್ಕಾರವು ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿದೆ. ಸಾರ್ವಜನಿಕರು ಕೇಳಿದ ಮಾಹಿತಿ ಬೇರೆ ಇಲಾಖೆಗೆ ಸಂಬಂಧಿಸಿದ್ದಾಗಿದ್ದರೆ, ವಿಷಯ ನಿರ್ವಾಹಕರು ಅಥವಾ ಅಧಿಕಾರಿಗಳು ವಿಳಂಬ ಮಾಡದೆ ತಕ್ಷಣವೇ ಆ ಅರ್ಜಿಯನ್ನು ಸಂಬಂಧಪಟ್ಟ ಸಾರ್ವಜನಿಕ ಮಾಹಿತಿ ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಬೇಕು. ಮಾಹಿತಿದಾರನು ಅರ್ಜಿ ಸಲ್ಲಿಸಿದ 30 ದಿನಗಳ ಒಳಗಾಗಿ ಅರ್ಜಿದಾರರಿಗೆ ಮಾಹಿತಿ ತಲುಪಿಸಬೇಕು. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಅರ್ಜಿದಾರರಿಗೆ 100 ಪುಟಗಳವರೆಗೆ ಉಚಿತವಾಗಿ ಮಾಹಿತಿ ನೀಡಬೇಕು. ಆದರೆ, ಅವರು ಸಂಬಂಧಪಟ್ಟ ಪ್ರಾಧಿಕಾರದಿಂದ ಪಡೆದ ಪ್ರಮಾಣಪತ್ರ ಅರ್ಜಿಯೊಂದಿಗೆ ಒದಗಿಸುವುದು ಕಡ್ಡಾಯವಾಗಿರುತ್ತದೆ.
ಯಾವುದೇ ಸಂಘ ಸಂಸ್ಥೆಯ ಹೆಸರಿನಲ್ಲಿ ಮಾಹಿತಿ ಕೇಳುವಾಗ, ಆ ಸಂಸ್ಥೆಯ ಪದಾಧಿಕಾರಿಯು ಮೊದಲು ತನ್ನ ಹೆಸರನ್ನು ಸ್ಪಷ್ಟವಾಗಿ ಸೂಚಿಸಬೇಕು. ಹಾಗಿದ್ದಲ್ಲಿ ಮಾತ್ರ ಮಾಹಿತಿ ನೀಡಬೇಕು, ಇಲ್ಲದಿದ್ದರೆ ಅರ್ಜಿಯನ್ನು ತಿರಸ್ಕರಿಸಬಹುದು ಎಂದು ತಿಳಿಸಿದರು.
ಬೆಂಗಳೂರು ಪೀಠದ ರಾಜ್ಯ ಮಾಹಿತಿ ಆಯುಕ್ತ ಕೆ.ಬದ್ರುದ್ದೀನ್, ಈ ಕಾಯ್ದೆ ಅತ್ಯಂತ ಸರಳ ಕಾಯ್ದೆ. ತುಂಬ ಸುಲಭವಾಗಿ ಆರಾಮದಾಯಕವಾಗಿ ನಿಭಾಯಿಸಬಹುದು. ಸರ್ಕಾರದ ಕೆಲಸ ಎಲ್ಲರಿಗೂ ಸಿಗುವಂಥದಲ್ಲ. ಆದ್ದರಿಂದ ಅಧಿಕಾರಿಗಳು ಸಹಾನುಭೂತಿ, ತಾಳ್ಮೆಯಿಂದ ಕಾರ್ಯ ನಿರ್ವಹಿಸಬೇಕು. ಮಾಹಿತಿ ಹಕ್ಕು ಅರ್ಜಿ ಬಂದಾಗ ತಾಳ್ಮೆ ಸಹಾನುಭೂತಿಯಿಂದ ಓದಿಕೊಂಡು ಅರ್ಥಮಾಡಿಕೊಂಡು ಪ್ರತ್ಯುತ್ತರ ನೀಡಬೇಕು. ಸರಿಯಾದ ಸಮಯಕ್ಕೆ ಅಂದರೆ ಕಾಯ್ದೆಯನ್ವಯ 30 ದಿನಗಳ ಒಳಗಾಗಿ ವಿಲೇವಾರಿ ಮಾಡದಿದ್ದಲ್ಲಿ, 25 ಸಾವಿರ ದಂಡ ಮತ್ತು 1 ಲಕ್ಷದವರೆಗೆ ಪರಿಹಾರ ನೀಡಲು ಶಿಫಾರಸು ಮಾಡಲು ಆಯೋಗಕ್ಕೆ ಅವಕಾಶವಿದೆ. ಆದ್ದರಿಂದ ಅಧಿಕಾರಿಗಳು ಜಾವಾವಾಬ್ಧರಿಯುತವಾಗಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಈ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಈ ಕಾಯ್ದೆಯಡಿ ಮಾಹಿತಿ ಪಡೆಯಲು ಅವಕಾಶವಿದೆ. ಯಾವುದೇ ಅನಕ್ಷರಸ್ಥ ವ್ಯಕ್ತಿ ಮಾಹಿತಿ ಕೇಳಿ ಬಂದಾಗ ಮಾಹಿತಿ ನೀಡುವುದು ಅಧಿಕಾರಿಗಳ ಕರ್ತವ್ಯ ಎಂದರು.
ಬೆಂಗಳೂರು ಪೀಠದ ರಾಜ್ಯ ಮಾಹಿತಿ ಆಯುಕ್ತ ಡಾ. ಹರೀಶ್ ಕುಮಾರ್ ಮಾತನಾಡಿ, ಜನರ ಆಶೋತ್ತರಗಳಿಗೆ ಅನುಗುಣವಾಗಿ ಕಾಯ್ದೆ ಕಾನೂನು ರೂಪಿಸಲಾಗುತ್ತದೆ. ಅದರಂತೆ ಅಷ್ಟೇ ಅಧಿಕಾರ ಮಾಹಿತಿ ಹಕ್ಕು ಕೇಳುವ ಸಾರ್ವಜನಿಕನಿಗೆ ಇದೆ. ಸ್ವಾತಂತ್ರ್ಯಬಂದ 50 ವರ್ಷಗಳ ನಂತರ ಈ ಕಾಯ್ದೆ ಅಳವಡಿಸಿಕೊಳ್ಳಲಾಗಿದೆ. ಈ ಕಾಯ್ದೆಯ ಮುಖಾಂತರ ಸಾರ್ವಜನಿಕರು ನೇರವಾಗಿ ಆಡಳಿತ ವ್ಯವಸ್ಥೆಯಲ್ಲಿ ಭಾಗಿಯಾಗುತ್ತಿದ್ದಾರೆ. ಅಧಿಕಾರಿಗಳು ಅವರ ಆಶೋತ್ತರಗಳಿಗೆ ಉತ್ತದಾಯಿಗಳಾಗಿ ಕಾರ್ಯನಿರ್ವಹಿಸಬೇಕಿದೆ. ಈ ನಿಟ್ಟಿನಲ್ಲಿ ಕಾಯ್ದೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಡಬೇಕಿದೆ ಎಂದರು.
ಮಾಹಿತಿದಾರನು ಈ ಹಿಂದೆ ಕೇಳಿದ ಮಾಹಿತಿಯ್ನನೇ ಒಂದೆರಡು ವರ್ಷಗಳ ನಂತರ ಅದೇ ಮಾಹಿತಿಯನ್ನು ಕೇಳಿ ಅರ್ಜಿ ಸಲ್ಲಿಸಿದಾಗ ಸಾರ್ವಜನಿಕ ಮಾಹಿತಿ ಅಧಿಕಾರಿ ಮಾಹಿತಿ ನೀಡಲು ಅವಕಾಶವಿದೆಯೇ ಎಂದು ಅಧಿಕಾರಿಯೊಬ್ಬರು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಯಾವುದೇ ಮಾಹಿತಿದಾರನು ಈ ಹಿಂದೆ ಕೇಳಿದ ಮಾಹಿತಿಯನ್ನು ಒಂದೆರಡು ವರ್ಷ ನಂತರ ಕೇಳಿದಾಗ ಮಾಹಿತಿ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಪಡಿಸಿದರು.
ಅಧಿಕಾರಿಯೊಬ್ಬರು ಮಾತನಾಡಿ, ಮಾಹಿತಿದಾರನು ಇಲಾಖಾ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿ, ಕಾಮಗಾರಿಗಳ ಅನುದಾನ, ಸ್ಥಿತಿಗತಿ ಕೇಳಿ ಮಾಹಿತಿ ಕೇಳುವುದಲ್ಲದೇ, ಸಾರ್ವಜನಿಕ ಮಾಹಿತಿ ಅಧಿಕಾರಿ ನೀಡಿದ ಮಾಹಿತಿ ಅನುಸಾರ ಮಾಹಿತಿದಾರನಿಗೆ ಸ್ವತಃ ಅಧಿಕಾರಿಗಳೇ ಕಾಮಾಗಾರಿಗಳ ಸ್ಥಳ ಪರಿಶೀಲನೆಗೆ ಕರೆದೊಯ್ಯುವಂತೆ ಅರ್ಜಿ ಸಲ್ಲಿಸಿದಾಗ ಯಾವ ರೀತಿ ವಿಲೇವಾರಿ ಮಾಡಲು ಅವಕಾಶವಿದೆ ಎಂದು ತಮ್ಮಲ್ಲಿನ ಗೊಂದಲ ಹೇಳಿಕೊಂಡರು. ಈ ವೇಳೆ ಆಯುಕ್ತರು ಪ್ರತ್ಯುತ್ತರಿಸಿ ಕಾಮಗಾರಿ ಪ್ರಗತಿ ಹಂತದಲ್ಲಿದ್ದರೆ, ಮಾಹಿತಿ ನೀಡದೇ ಕಾಮಗಾರಿ ಪ್ರಗತಿ ಹಂತದಲ್ಲಿದೆ ಎಂದು ಹಿಂಬರಹ ನೀಡಬಹುದು. ಒಂದು ವೇಳೆ ಕಾಮಗಾರಿ ಪೂರ್ಣಗೊಂಡಿದ್ದರೆ ಅದಕ್ಕೆ ಸಂಬಂಧಿಸಿದ ಮಾಹಿತಿ ನೀಡುವುದಷ್ಟೇ ಸಾರ್ವಜನಿಕ ಮಾಹಿತಿ ಅಧಿಕಾರಿ ಕೆಲಸ. ಅದು ಹೊರತುಪಡಿಸಿ ಮಾಹಿತಿದಾರನಿಗೆ ಕಾಮಗಾರಿ ಸ್ಥಳ ಇನ್ನಿತರೆ ಕುರಿತು ಖುದ್ದು ಪರಿಶೀಲನೆ ನಡೆಸಿ ಮಾಹಿತಿ ಒದಗಿಸಬೇಕು ಎಂದು ಕಾಯ್ದೆಯಲ್ಲಿ ಉಲ್ಲೇಖಿಸಿರುವುದಿಲ್ಲ ಎಂದು ತಿಳಿಹೇಳಿದರು.
ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಕೇಳಿದ ವಿವಿಧ ಪ್ರಶ್ನೆಗಳು ಮತ್ತು ಸಂಶಯಗಳಿಗೆ ಸೂಕ್ತ ಉತ್ತರ ನೀಡಿ, ಗೊಂದಲಗಳನ್ನು ನಿವಾರಿಸಲಾಯಿತು.
ಕಾರ್ಯಗಾರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಸೇರಿದಂತೆ ವಿವಿಧ ಇಲಾಖೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಇದ್ದರು.






