Vijayanagara | ಎಡಿಎಫ್ ಉಚಿತ ಆರೋಗ್ಯ ಶಿಬಿರಕ್ಕೆ ಭರ್ಜರಿ ಸ್ಪಂದನೆ; 600ಕ್ಕೂ ಹೆಚ್ಚು ಮಂದಿಗೆ ತಪಾಸಣೆ

ಹೊಸಪೇಟೆ/ವಿಜಯನಗರ: ಅಂಜುಮನ್ ಡೆವಲಪ್ಮೆಂಟ್ ಫೋರಂ (ADF) ವತಿಯಿಂದ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, 600ಕ್ಕೂ ಹೆಚ್ಚು ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ತಜ್ಞ ವೈದ್ಯರಿಂದ ಉಚಿತ ವೈದ್ಯಕೀಯ ಸಲಹೆ ಹಾಗೂ ಮಾರ್ಗದರ್ಶನ ಪಡೆದರು.
ಶಿಬಿರದಲ್ಲಿ ಯೆನೆಪೊಯ ವೈದ್ಯಕೀಯ ಕಾಲೇಜಿನ 17 ಮಂದಿ ತಜ್ಞ ವೈದ್ಯರು ಭಾಗವಹಿಸಿ ಸಾಮಾನ್ಯ ಆರೋಗ್ಯ ತಪಾಸಣೆ, ಸ್ತನ ಕ್ಯಾನ್ಸರ್ ಹಾಗೂ ಗರ್ಭಕಂಠ ಕ್ಯಾನ್ಸರ್ ತಪಾಸಣೆ ಸೇರಿದಂತೆ ವಿವಿಧ ಆರೋಗ್ಯ ಸೇವೆಗಳನ್ನು ಉಚಿತವಾಗಿ ಒದಗಿಸಿದರು. ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವ ಮಹತ್ವ ಮತ್ತು ನಿಯಮಿತ ಆರೋಗ್ಯ ತಪಾಸಣೆಯ ಅಗತ್ಯದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಹಬೀಬುಲ್ಲಾ, ಡಾ. ಮೊಹಮ್ಮದಿ, ಫಝ್ಲುಲ್ಲಾ, ಎಸ್‌ಡಿಪಿಐ ವಿಜಯನಗರ ಜಿಲ್ಲಾ ಅಧ್ಯಕ್ಷ ಸದ್ದಾಂ ಹಂಪಿ, ಸೈಯದ್ ನಾಜಿಮುದ್ದೀನ್, ಫೈರೋಜ್ ಪೀರಾನ್ ಹಾಗೂ 16ನೇ ವಾರ್ಡ್ ನಗರಸಭೆ ಸದಸ್ಯೆ ಮುಮ್ತಾಜ್ ಬೇಗಂ ಭಾಗವಹಿಸಿದ್ದರು. ಸಮಾಜದ ಆರೋಗ್ಯ ರಕ್ಷಣೆಗೆ ಪೂರಕವಾಗಿರುವ ಇಂತಹ ಜನಪರ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಅಂಜುಮನ್ ಡೆವಲಪ್ಮೆಂಟ್ ಫೋರಂನ ಪದಾಧಿಕಾರಿಗಳು ಹಾಗೂ ಸದಸ್ಯರಾದ ಜಿ. ಖಾಜಾ ಹುಸೇನ್ ನಿಯಾಜಿ, ಬಿ. ಬಾಬಾ ಸಾಬ್, ಡಾ. ಕಲಿಮುಲ್ಲಾ, ಅಡ್ವೊಕೇಟ್ ಮೊಹಮ್ಮದ್ ಅಜರುದ್ದೀನ್, ಅಡ್ವೊಕೇಟ್ ಸದ್ದಾಂ ಹುಸೇನ್, ಅಬ್ದುಲ್ ಸುಭಾನ್, ಘೌಸ್ ಪೀರ್, ಶೇಖ್ ತಾಜುದ್ದೀನ್, ಮೊಹಮ್ಮದ್ ಜಾಫರ್, ಜೀಲಾನ್ ಕೆ. ಹಾಗೂ ಮೊಹಮ್ಮದ್ ನೂರ್ ಸೇರಿದಂತೆ ಹಲವರು ಶಿಬಿರದ ಯಶಸ್ಸಿಗೆ ಶ್ರಮಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಯೆನೆಪೊಯ ವೈದ್ಯಕೀಯ ಕಾಲೇಜಿನ ವೈದ್ಯರ ತಂಡ, ಸಹಕರಿಸಿದ ಗಣ್ಯರು, ಸ್ವಯಂಸೇವಕರು ಹಾಗೂ ಶಿಬಿರದಲ್ಲಿ ಭಾಗವಹಿಸಿದ ಸಾರ್ವಜನಿಕರಿಗೆ ಅಂಜುಮನ್ ಡೆವಲಪ್ಮೆಂಟ್ ಫೋರಂ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.






