Vijayanagara | ಜಿಲ್ಲೆಯಲ್ಲಿ ಶೇ.98.56ರಷ್ಟು ಮತದಾರರ ನೋಟಿಸ್ ವಿತರಣೆ ಪೂರ್ಣ : ಡಿಸಿ ಕವಿತಾ ಮನ್ನಿಕೇರಿ

ವಿಜಯನಗರ (ಹೊಸಪೇಟೆ) : ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ ಅಭಿಯಾನದ ಅಂಗವಾಗಿ ವಿಜಯನಗರ ಜಿಲ್ಲೆಯಲ್ಲಿ ಒಟ್ಟು 30,622 ನೋಟಿಸ್‌ಗಳ ಪೈಕಿ 30,184 ನೋಟಿಸ್‌ಗಳನ್ನು ಯಶಸ್ವಿಯಾಗಿ ವಿತರಿಸಲಾಗಿದ್ದು, ಇದು ಶೇ.98.56ರಷ್ಟು ಪ್ರಗತಿಯನ್ನು ಸೂಚಿಸುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ.
ವಿತರಿಸಲಾದ ನೋಟಿಸ್‌ಗಳಲ್ಲಿ 10,983 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದ್ದು, 19,047 ಪ್ರಕರಣಗಳ ವಿಚಾರಣೆ ಪ್ರಗತಿಯಲ್ಲಿದೆ. ವಿಚಾರಣೆ ಪೂರ್ಣಗೊಳಿಸಲು ಅಕ್ಟೋಬರ್ 12 ಕೊನೆಯ ದಿನಾಂಕವಾಗಿದ್ದು, ಆಕ್ಷೇಪಣೆಗಳ ಅಂತಿಮ ವಿಲೇವಾರಿಗೆ ಅಕ್ಟೋಬರ್ 22 ನಿಗದಿಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲೆಯ ಹಡಗಲಿ, ಹಗರಿಬೊಮ್ಮನಹಳ್ಳಿ, ವಿಜಯನಗರ, ಕೂಡ್ಲಿಗಿ ಹಾಗೂ ಹರಪನಹಳ್ಳಿ ತಾಲೂಕುಗಳನ್ನು ಒಳಗೊಂಡಂತೆ ಒಟ್ಟು 9,95,693 ಮತದಾರರಿದ್ದು, ಇವರಲ್ಲಿ 4,99,838 ಪುರುಷರು, 4,95,749 ಮಹಿಳೆಯರು ಹಾಗೂ 106 ತೃತೀಯ ಲಿಂಗಿ ಮತದಾರರು ಸೇರಿದ್ದಾರೆ.
ಕಳೆದ ಜೂ.16ರಿಂದ ಸೆಪ್ಟೆಂಬರ್ 16ರವರೆಗೆ ಮೂರು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 48,044 ಅರ್ಜಿಗಳು ಸ್ವೀಕೃತವಾಗಿವೆ. ಇದರಲ್ಲಿ ನಮೂನೆ–6ರಡಿ ಹೊಸ ಮತದಾರರ ನೋಂದಣಿಗೆ 10,324 ಅರ್ಜಿಗಳು, ಅನಿವಾಸಿ ಭಾರತೀಯರ ನೋಂದಣಿಗೆ 7 ಅರ್ಜಿಗಳು, ನಮೂನೆ–7ರಡಿ ಹೆಸರು ತೆಗೆದುಹಾಕುವಿಕೆ ಅಥವಾ ಆಕ್ಷೇಪಣೆಗೆ 956 ಅರ್ಜಿಗಳು ಹಾಗೂ ನಮೂನೆ–8ರಡಿ ವಿಳಾಸ ಬದಲಾವಣೆ ಮತ್ತು ತಿದ್ದುಪಡಿಗೆ 36,757 ಅರ್ಜಿಗಳು ಸಲ್ಲಿಕೆಯಾಗಿವೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಸೆಪ್ಟೆಂಬರ್ 19 ಮತ್ತು 20ರಂದು ಜಿಲ್ಲಾದ್ಯಂತ ವಿಶೇಷ ಮತದಾರರ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. 2026ರ ಅಕ್ಟೋಬರ್ 1ರಂದು 18 ವರ್ಷ ಪೂರ್ಣಗೊಳ್ಳುವ ಯುವಕ-ಯುವತಿಯರು ನಮೂನೆ–6ರ ಮೂಲಕ ಹೊಸ ಮತದಾರರಾಗಿ ನೋಂದಾಯಿಸಿಕೊಳ್ಳಬಹುದು.
ಆಗಸ್ಟ್ 17ರಿಂದ ಸೆಪ್ಟೆಂಬರ್ 16ರವರೆಗೆ ಸ್ವೀಕರಿಸಲಾದ ಅರ್ಹ ಅರ್ಜಿಗಳನ್ನು ಪರಿಶೀಲಿಸಿ ಅಕ್ಟೋಬರ್ 19ರಂದು ಪ್ರಕಟವಾಗುವ ಅಂತಿಮ ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗುತ್ತದೆ.
ಅರ್ಹ ಮತದಾರರು voters.eci.gov.in ಪೋರ್ಟಲ್, ECINET ಮೊಬೈಲ್ ಆ್ಯಪ್ ಅಥವಾ ಸಂಬಂಧಿತ ಎಆರ್‌ಒ ಮತ್ತು ಬಿಎಲ್‌ಒ ಕಚೇರಿಗಳಲ್ಲಿ ನೇರವಾಗಿ ಅರ್ಜಿ ಸಲ್ಲಿಸಬಹುದು. ಹಿರಿಯ ನಾಗರಿಕರು, ವಿಕಲಚೇತನರು ಹಾಗೂ ಅನಾರೋಗ್ಯ ಪೀಡಿತರ ಪರವಾಗಿ ಕುಟುಂಬದ ಹಿರಿಯ ಸದಸ್ಯರು ಅಗತ್ಯ ದಾಖಲೆಗಳೊಂದಿಗೆ ಎಆರ್‌ಒ ಅಥವಾ ಎಇಆರ್‌ಒ ಕಚೇರಿಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ.






