Vijayanagara | ಶೀಲ ಶಂಕಿಸಿ ಪತ್ನಿಯ ಕೊಲೆ : ಪತಿಯ ಬಂಧನ

ಹೊಸಪೇಟೆ: ಪತ್ನಿಯ ಶೀಲದ ಮೇಲೆ ಅನುಮಾನಗೊಂಡ ಪತಿಯೊಬ್ಬ ಆಕೆಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಭುವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಭುವನಹಳ್ಳಿ ಗ್ರಾಮದ ನಿವಾಸಿ ಶಶಿಕಲಾ (35) ಕೊಲೆಯಾದ ಮಹಿಳೆ. ಕೃತ್ಯ ಎಸಗಿದ ಆರೋಪದ ಮೇಲೆ ಆಕೆಯ ಪತಿ ಬಸವರಾಜ್ (36)ನನ್ನು ಹೊಸಪೇಟೆ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪತ್ನಿಯ ಶೀಲದ ಬಗ್ಗೆ ಬಸವರಾಜ್ ಕೆಲ ದಿನಗಳಿಂದ ಅನುಮಾನ ವ್ಯಕ್ತಪಡಿಸುತ್ತಿದ್ದ ಎನ್ನಲಾಗಿದ್ದು, ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಘಟನೆ ನಡೆದ ದಿನವೂ ಇದೇ ವಿಷಯಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ.
ಈ ವೇಳೆ ಕೋಪಗೊಂಡ ಬಸವರಾಜ್ ಮನೆಯಲ್ಲಿದ್ದ ಕೊಡಲಿಯಿಂದ ಶಶಿಕಲಾ ಮೇಲೆ ದಾಳಿ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡ ಶಶಿಕಲಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಬಳಿಕ ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.






