Vijayanagara | ಹಾಲು, ಹಾಲಿನ ಉತ್ಪನ್ನಗಳ ಬೆಲೆ ಏರಿಕೆ ಹಿಂಪಡೆಯಲು ವಿಮೆನ್ ಇಂಡಿಯಾ ಮೂವ್ಮೆಂಟ್ ಆಗ್ರಹ

ಹೊಸಪೇಟೆ/ವಿಜಯನಗರ: ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯನ್ನು ತಕ್ಷಣ ಹಿಂಪಡೆಯುವ ಮೂಲಕ ಜನಸಾಮಾನ್ಯರು, ಮಹಿಳೆಯರು ಹಾಗೂ ಮಕ್ಕಳ ಹಿತಾಸಕ್ತಿ ಕಾಪಾಡಬೇಕು ಎಂದು ಒತ್ತಾಯಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ವಿಜಯನಗರ ಜಿಲ್ಲಾ ಸಮಿತಿಯ ವತಿಯಿಂದ ಶುಕ್ರವಾರ ಹೊಸಪೇಟೆಯ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಬೆಲೆ ಏರಿಕೆ ವಿರುದ್ಧ ಘೋಷಣೆಗಳನ್ನು ಕೂಗಿ, ಮುಖ್ಯಮಂತ್ರಿ ಅವರಿಗೆ ಉದ್ದೇಶಿಸಿದ ಮನವಿ ಪತ್ರವನ್ನು ತಹಶೀಲ್ದಾರ್ ಮೂಲಕ ಸಲ್ಲಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ WIM ಮುಖಂಡರು, ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳ ಬೆಲೆ ಹೆಚ್ಚಿಸಿರುವುದು ಜನಸಾಮಾನ್ಯರ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಹೇರಿದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಾಲು ಪ್ರತಿಯೊಂದು ಕುಟುಂಬದ ದೈನಂದಿನ ಆಹಾರದ ಪ್ರಮುಖ ಭಾಗವಾಗಿದೆ. ಅದರ ಬೆಲೆ ಏರಿಕೆಯು ವಿಶೇಷವಾಗಿ ಮಕ್ಕಳು, ಮಹಿಳೆಯರು ಮತ್ತು ವೃದ್ಧರ ಪೌಷ್ಟಿಕ ಆಹಾರದ ಮೇಲೂ ಪರಿಣಾಮ ಬೀರಲಿದೆ. ಸರ್ಕಾರ ರೈತರ ಹಿತಾಸಕ್ತಿಯನ್ನು ಕಾಪಾಡುವುದರ ಜತೆಗೆ ಗ್ರಾಹಕರಿಗೂ ಹೊರೆಯಾಗದ ಸಮತೋಲಿತ ಬೆಲೆ ನೀತಿಯನ್ನು ಜಾರಿಗೊಳಿಸಬೇಕು. ಆದ್ದರಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ WIM ವಿಜಯನಗರ ಜಿಲ್ಲಾ ಅಧ್ಯಕ್ಷೆ ಹೀನಾ ಕೌಸರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರಿಫಾ, ಜಿಲ್ಲಾ ಉಪಾಧ್ಯಕ್ಷರಾದ ಸನಾ ಬಾನು, ಆಯಿಷಾ, ಹೀನಾ, ರೈತ ಮುಖಂಡ ಜಿ. ಖಾಜಾ ಹುಸೇನ್ ನಿಯಾಜಿ, SDPI ವಿಜಯನಗರ ಜಿಲ್ಲಾ ಅಧ್ಯಕ್ಷ ಸದ್ದಾಂ ಹಂಪಿ, ಜಾಫರ್ ಹುಸೇನ್ ಸೇರಿದಂತೆ WIM ಕಾರ್ಯಕರ್ತರು ಹಾಗೂ ಇತರರು ಉಪಸ್ಥಿತರಿದ್ದರು.
ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ದುಸ್ತರವಾಗುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರು ಮತ್ತು ಜನಸಾಮಾನ್ಯರ ಹಿತದೃಷ್ಟಿಯಿಂದ ಬೆಲೆ ಏರಿಕೆ ಹಿಂಪಡೆಯುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು WIM ಮುಖಂಡರು ಎಚ್ಚರಿಸಿದರು.






