10 ವರ್ಷದ ಹಿಂದೆ ನೀಡಿದ ಭರವಸೆಯನ್ನು ಮರೆಯದೇ ಅನುಷ್ಠಾನ ಮಾಡುತ್ತಿದ್ದೇವೆ : ಸಚಿವ ಕೃಷ್ಣ ಬೈರೇಗೌಡ

ಕೃಷ್ಣ ಬೈರೇಗೌಡ
ಹೊಸಪೇಟೆ : ದಾಖಲೆ ಇಲ್ಲದ ಗ್ರಾಮಗಳ ಜನರಿಗೆ ಶಾಶ್ವತ ಪರಿಹಾರ ಕಲ್ಪಿಸುವ ಕುರಿತು 2015ರಲ್ಲಿ ರಾಹುಲ್ ಗಾಂಧಿ ಭರವಸೆ ನೀಡಿದ್ದರು. ನಮ್ಮ ಸರಕಾರವು 10 ವರ್ಷದ ಹಿಂದೆ ನೀಡಿದ ಭರವಸೆಯನ್ನು ಮರೆಯದೇ ಇಂದಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅನುಷ್ಠಾನ ಮಾಡುತ್ತಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಮಂಗಳವಾರ ರಾಜ್ಯ ಸರಕಾರವು ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯ ಸರಕಾರಿ ಜಿಲ್ಲಾ ಕ್ರೀಡಾಂಗಣದಲ್ಲಿ 1,11,111 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಲು ಹಮ್ಮಿಕೊಂಡಿದ್ದ ‘ಸಮರ್ಪಣೆ ಸಂಕಲ್ಪ’ ಸಮಾವೇಶದಲ್ಲಿ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.
ನಾವು 2017ರಲ್ಲಿ ಇದಕ್ಕಾಗಿ ಕಾನೂನು ಮಾಡಿ ಆರಂಭಿಸಿದ ಕೆಲಸವನ್ನು ಹಿಂದಿನ ಸರಕಾರ ಪೂರ್ಣ ಮಾಡಲಿಲ್ಲ. ಆದರೆ, ಕೊಟ್ಟ ಮಾತಿನಂತೆ ನಡೆಯುವ ನಮ್ಮ ಸರಕಾರ ಇದನ್ನು ಆಂದೋಲನದ ಮಾದರಿಯಲ್ಲಿ ಪರಿಗಣಿಸಿ, ಕಂದಾಯ ಇಲಾಖೆಯ ಎಲ್ಲ ಅಧಿಕಾರಿಗಳು ಎರಡು ವರ್ಷಗಳಿಂದ ಜನರ ಮನೆ ಬಾಗಿಲಿಗೆ ಹೋಗಿ ನಿರಂತರ ಪ್ರಯತ್ನದಿಂದ ಇಂದಿಗೆ 1,11,111 ಹಕ್ಕು ಪತ್ರಗಳನ್ನು ತಯಾರಿಸಿದ್ದೇವೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಇದು ಡಿಜಿಟಲ್ ಹಕ್ಕುಪತ್ರ, ನಕಲು ಮಾಡಲಾಗುವುದಿಲ್ಲ, ಕಳೆದು ಹೋಗುವುದಿಲ್ಲ, ಮೂಲ ಕಡತ ಕಾಣೆಯಾಗಲು ಅವಕಾಶವಿಲ್ಲ. ಇವುಗಳನ್ನು ತಹಶೀಲ್ದಾರರಿಂದ ಉಪ ನೋಂದಣಾಧಿಕಾರಿಯವರ ಬಳಿ ನೋಂದಣಿ ಪತ್ರ ಮುಖಾಂತರ ನೋಂದಣಿ ಮಾಡಿಸಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಸಹಕಾರದಿಂದ ಗ್ರಾಮ ಪಂಚಾಯಿತಿಯಲ್ಲಿ ಅವರಿಗೆ ಆಟೋಮ್ಯಾಟಿಕ್ ಆಗಿ ಖಾತೆ ಮಾಡಿಸಿ ಸಂಪೂರ್ಣ ದಾಖಲೆ ನೀಡುತ್ತಿದ್ದೇವೆ. ದೇಶದ ಬೇರೆ ಯಾವ ರಾಜ್ಯದಲ್ಲೂ ಈ ರೀತಿ ಪಕ್ಕಾ ದಾಖಲೆ ನೀಡಿದ ಉದಾಹರಣೆ ಇಲ್ಲ ಎಂದು ಅವರು ಹೇಳಿದರು.
ಶತಮಾನಗಳಿಂದಲೂ ಜನವಸತಿ ಹೊಂದಿರುವ ಊರುಗಳಾಗಿದ್ದರೂ, ನೂರಾರು ಮನೆಗಳಿದ್ದರೂ ಗ್ರಾಮದ ಮಾನ್ಯತೆ ಇಲ್ಲದೆ, ಮನೆಗಳಿಗೆ ದಾಖಲೆ ಇಲ್ಲದೆ, ಊರುಗಳಿಗೆ ಮೂಲಭೂತ ಸೌಲಭ್ಯ ನೀಡಲು ಸಾಧ್ಯವಾಗದೆ, ಮನೆ ಮಾರಾಟ ಮಾಡಲಾಗದೆ, ಮಕ್ಕಳಿಗೆ ಮನೆ, ಆಸ್ತಿ ವರ್ಗಾವಣೆ ಮಾಡಲಾಗದೆ, ಆಶ್ರಯ ಯೋಜನೆ ಸಿಗದೆ, ಅನಿಶ್ಚಿತತೆಯ ಬದುಕನ್ನು ಈ ಜನ ಅನುಭವಿಸುತ್ತಿದ್ದರು ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಲಂಬಾಣಿ, ಗೊಲ್ಲ, ಭೋವಿ, ಗಾವಲಿ, ಸೋಲಿಗ, ಕಾಡು ಕುರುಬ, ನಾಯಕರು, ಅಲೆಮಾರಿಗಳು, ವಾಸಿಸುವ ತಾಂಡಾ, ಹಾಡಿ, ಹಟ್ಟಿ, ಮಜರೆ, ಕ್ಯಾಂಪ್ ಹಾಗೂ ಸಾಮಾನ್ಯ ರೈತರು ವಾಸಿಸುವ ಅನೇಕ ದಾಖಲೆ ಇಲ್ಲದ ಗ್ರಾಮಗಳ ಜನರಿಗೆ ಶಾಶ್ವತ ಪರಿಹಾರವಾಗಿ ಈ ಕಾರ್ಯಕ್ರಮವನ್ನು ರೂಪಿಸಿದ್ದೇವೆ ಎಂದು ಅವರು ಹೇಳಿದರು.







