ವಿಜಯನಗರದಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯಕಾರಿ ಸಭೆ

ಹೊಸಪೇಟೆ/ವಿಜಯನಗರ: ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಹೊಸಪೇಟೆ ನಗರದ ಮಲ್ಲಿಗೆ ಹೋಟೆಲ್‌ನಲ್ಲಿ ಜಿಲ್ಲಾ ಮಟ್ಟದ ಎಕ್ಸಿಕ್ಯೂಟಿವ್ ಸಭೆ ನಡೆಯಿತು.
ಭಾರತೀಯ ಯುವ ಕಾಂಗ್ರೆಸ್ (IYC) ರಾಜ್ಯ ಉಸ್ತುವಾರಿ ಡಾ. ಶ್ರೀನಿವಾಸ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳು, ರಾಜ್ಯ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ ಸಂಘಟನೆ ಬಲವರ್ಧನೆ, ಜನಪರ ಹೋರಾಟಗಳು ಹಾಗೂ ಮುಂಬರುವ ಚುನಾವಣೆಗಳ ಕುರಿತು ಸಮಗ್ರ ಚರ್ಚೆ ನಡೆಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ. ಶ್ರೀನಿವಾಸ್ ಅವರು ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಟೀಕಿಸಿದರು. ನೀಟ್ ಪರೀಕ್ಷೆಯ ಅವ್ಯವಸ್ಥೆ, ಯುವಕರ ಉದ್ಯೋಗ ಸಮಸ್ಯೆ, ಬೆಲೆ ಏರಿಕೆ ಸೇರಿದಂತೆ ವಿವಿಧ ಜನಪರ ವಿಷಯಗಳ ವಿರುದ್ಧ ರಾಜ್ಯಾದ್ಯಂತ ಹೋರಾಟಗಳನ್ನು ರೂಪಿಸುವಂತೆ ಕರೆ ನೀಡಿದರು.
ಮುಂದಿನ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ಕಾರ್ಯಕರ್ತರು ಜನರ ನಡುವೆ ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು. 2028ರ ವಿಧಾನಸಭೆ ಹಾಗೂ ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಯುವ ಕಾಂಗ್ರೆಸ್ ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದು ಹೇಳಿದರು.
ಈ ವೇಳೆ ಮಾತನಾಡಿದ ವಿಜಯನಗರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ನಾಯ್ಕ್, ಪ್ರತಿ ತಿಂಗಳು ಸಭೆ ನಡೆಸುವ ಮೂಲಕ ಸಂಘಟನಾ ಚಟುವಟಿಕೆಗಳಿಗೆ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು. ಸಭೆಗಳಿಗೆ ಸ್ಥಳದ ಸಮಸ್ಯೆ ಇರುವ ಕಾರಣ ಈ ಬಾರಿ ಮಲ್ಲಿಗೆ ಹೋಟೆಲ್‌ನಲ್ಲಿ ಆಯೋಜಿಸಲಾಗಿದೆ ಎಂದರು.
ತಮ್ಮ ಕುರಿತು ಹರಿದಾಡಿದ್ದ ವಜಾ ಸಂಬಂಧಿತ ವದಂತಿಗಳಿಗೆ ಪ್ರತಿಕ್ರಿಯಿಸಿದ ಅವರು, ಪಕ್ಷದ ಉಸ್ತುವಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಿಕೊಂಡಿದ್ದು, ಪ್ರಸ್ತುತ ಸಂಘಟನಾ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದಾಗಿ ಸ್ಪಷ್ಟಪಡಿಸಿದರು.
ಸಭೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪದಾಧಿಕಾರಿಗಳು ಭಾಗವಹಿಸಿದ್ದರು.






