ವಿಜಯಪುರ | ಕೈಗಡಿಯಾರ ವಿಚಾರಕ್ಕೆ ಸ್ನೇಹಿತರಿಂದ ಹಲ್ಲೆ ಆರೋಪ; ಬಾಲಕ ಅನುಮಾನಾಸ್ಪದ ಸಾವು

ವಿಜಯಪುರ : ಕೈಗಡಿಯಾರ ವಿಷಯವಾಗಿ ಜಗಳ ನಡೆದು ಸ್ನೇಹಿತರಿಂದ ಹಲ್ಲೆಗೊಳಗಾಗಿದ್ದಾನೆ ಎನ್ನಲಾದ ಬಾಲಕ ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆ ನಗರದ ಯೋಗಾಪುರದಲ್ಲಿ ನಡೆದಿದ್ದು, ಬಾಲಕನ ಸಾವಿಗೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ಮೃತ ಬಾಲಕನ ಕುಟುಂಬ ನ್ಯಾಯಕ್ಕಾಗಿ ಶಾಲೆಯ ಎದುರು ಬಾಲಕನ ಮೃತದೇಹ ಇರಿಸಿ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದರು.
ಮೃತ ಬಾಲಕನನ್ನು ಅನ್ಸ್ (11) ಎಂದು ಗುರುತಿಸಲಾಗಿದೆ. ಬಿಹಾರ ಮೂಲದ ಸುನೀಲ್ ಹಾಗೂ ಶೃತಿ ಎಂಬವರ ಪುತ್ರನಾಗಿರುವ ಅನ್ಸ್‌ಅನ್ನು ಸ್ಥಳೀಯ ಖಾಸಗಿ ಶಿಕ್ಷಣ ಸಂಸ್ಥೆಯೊಂದಕ್ಕೆ ದಾಖಲಿಸಲಾಗಿತ್ತು.
ಕಳೆದ ಐದಾರು ದಿನಗಳ ಹಿಂದೆ ಬಾಲಕ ಅನ್ಸ್ ಧರಿಸಿದ ವಾಚ್‌ನ್ನು ಅದೇ ಓದುವ ವಿದ್ಯಾರ್ಥಿಗಳು ಕಸಿದುಕೊಂಡಿದ್ದರು, ಈ ವೇಳೆ ಜಗಳ ತಾರಕಕ್ಕೇರಿದ ಸಮಯದಲ್ಲಿ ಹಲ್ಲೆಗೊಳಗಾಗಿ ಬಾಲಕ ಅಸ್ವಸ್ಥನಾಗಿದ್ದ ಎನ್ನಲಾಗಿದೆ. ಬಳಿಕ ಪೋಷಕರು ಬಾಲಕನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಅನ್ಸ್ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಮೃತದೇಹ ಇರಿಸಿ ಪ್ರತಿಭಟನೆ :
ಮೃತ ಬಾಲಕನ ಕುಟುಂಬಸ್ಥರು ಬಾಲಕನ ಪಾರ್ಥಿವ ಶರೀರವನ್ನು ಶಿಕ್ಷಣ ಸಂಸ್ಥೆ ಎದುರಿನಲ್ಲಿ ಇರಿಸಿ ಪ್ರತಿಭಟನೆ ನಡೆಸಿದ್ದಾರೆ.
ʼಈ ಘಟನೆಗೆ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ, ನಮ್ಮ ಮಗ ಚಿಕಿತ್ಸೆ ಪಡೆಯುತ್ತಿರುವ ವಿಷಯವನ್ನು ಗಮನಕ್ಕೆ ತಂದರೂ ಸಹ ಯಾವುದರ ಬಗ್ಗೆಯೂ ಜವಾಬ್ದಾರಿ ತೋರಲಿಲ್ಲ, ಶಾಲೆಯಲ್ಲಿ ನಡೆದ ಗಲಾಟೆಯಿಂದಾಗಿಯೇ ನಮ್ಮ ಮಗ ಪ್ರಾಣ ಕಳೆದುಕೊಂಡಿದ್ದಾನೆ. ನಮಗೆ ನ್ಯಾಯ ಕೊಡಿʼ ಎಂದು ಕುಟುಂಬಸ್ಥರು ಎಂದು ಆಗ್ರಹಿಸಿದರು.
ಮಧ್ಯರಾತ್ರಿ ಪೊಲೀಸ್ ಅಧಿಕಾರಿಗಳ ತಂಡ ಸಹ ಆಗಮಿಸಿ ಅಗತ್ಯ ವಿಚಾರಣೆ ನಡೆಸಿತು. ವಿಜಯಪುರ ಡಿವೈಎಸ್‌ಪಿ ಬಸವರಾಜ ಯಲಿಗಾರ, ಗೋಲಗುಂಬಜ್ ಸಿಪಿಐ ಮಲ್ಲಯ್ಯ ಮಠಪತಿ ಸೇರಿದಂತೆ ಹಲವಾರು ಪೊಲೀಸ್ ಅಧಿಕಾರಿಗಳೂ ಪ್ರತಿಭಟನಾ ನಿರತ ಮೃತ ಬಾಲಕನ ಪೋಷಕರು ಹಾಗೂ ಸ್ಥಳಿಯರೊಂದಿಗೆ ಮಾತುಕತೆ ನಡೆಸಿದರು.
ಘಟನೆ ಕುರಿತು ದೂರು ನೀಡಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆಂದು ಭರವಸೆ ನೀಡಿದರು. ಪ್ರತಿಭಟನೆಯನ್ನು ಕೈಬಿಟ್ಟು ಮುಂದಿನ ಪ್ರಕ್ರಿಯೆಗೆ ಅವಕಾಶ ನೀಡಿ ಎಂದು ಹೇಳಿದರು. ಪೊಲೀಸ್ ಆಧಿಕಾರಿಗಳ ಭರವಸೆ ಕಾರಣ ಬಾಲಕನ ಮೃತದೇಹ ಮಣೋತ್ತರ ಪರೀಕ್ಷೆಗೆ ರವಾನೆ ಮಾಡಲು ಪೋಷಕರು ಹಾಗೂ ಸ್ಥಳೀಯರು ಸಹಕಾರ ನೀಡಿದರು.
ಬಾಲಕನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಅದರ ವರದಿ ಆಧರಿಸಿ ಮುಂದಿನ ತನಿಖೆ ನಡೆಯುವ ಸಾಧ್ಯತೆ ಇದ್ದು, ಈ ಘಟನೆಗೆ ಸಂಬಧಿಸಿದಂತೆ ಇಲ್ಲಿಯವರೆಗೆ ಎಫ್‌ಐಆರ್ ದಾಖಲಾಗಿಲ್ಲ.







