ಮುದ್ದೇಬಿಹಾಳ | ತೋಳಗಳ ದಾಳಿಗೆ 10 ಕುರಿಗಳು ಬಲಿ

ವಿಜಯಪುರ : ತೋಳಗಳು ದಾಳಿ ನಡೆಸಿದ್ದು, ಸುಮಾರು 10 ಕುರಿಗಳನ್ನು ಬಲಿ ಪಡೆದಿವೆ. 5 ಕುರಿಗಳು ಕಣ್ಮರೆಯಾದರೆ ಇನ್ನೂ 10ಕ್ಕೂ ಹೆಚ್ಚು ಕುರಿಗಳು ತೀವ್ರವಾಗಿ ಗಾಯಗೊಂಡಿರುವ ಘಟನೆ ಮುದ್ದೇಬಿಹಾಳ ತಾಲ್ಲೂಕಿನ ನಾಗಬೇನಾಳ ಗ್ರಾಮದಲ್ಲಿ ಗುರುವಾರ ನಡೆದಿದೆ.
ಗ್ರಾಮದ ಬಸವರಾಜ ಸಿದ್ದಪ್ಪ ಸುಲ್ತಾನಪೂರ ಅವರ ಕುರಿಗಳ ಗುಂಪಿನ ಮೇಲೆ ತೋಳಗಳ ಗುಂಪು ಏಕಾಏಕಿ ದಾಳಿ ನಡೆಸಿವೆ ಎನ್ನಲಾಗಿದೆ. ಗಾಯಗೊಂಡಿರುವ ಕುರಿಗಳಿಗೆ ಸ್ಥಳೀಯ ಪಶುವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕುರಿ ಸಾಕಾಣಿಕೆಯನ್ನೇ ಜೀವನಾಧಾರ ಮಾಡಿಕೊಂಡಿರುವ ಬಸವರಾಜಗೆ ಅಪಾರ ಆರ್ಥಿಕ ನಷ್ಟ ಉಂಟಾಗಿದ್ದು, ತಕ್ಷಣ ಕ್ರಮ ಕೈಗೊಂಡು ತೋಳಗಳ ಹಾವಳಿ ತಡೆಯಬೇಕು ಮತ್ತು ಶೀಘ್ರ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ಸ್ಥಳಕ್ಕೆ ಭೇಟಿ: ವಿಷಯ ತಿಳಿದು ಸ್ಥಳಕ್ಕೆ ಶಾಸಕ ಸಿ.ಎಸ್.ನಾಡಗೌಡ ಪಾಟೀಲ ಹಾಗೂ ಪ.ಪಂ ಸದಸ್ಯ ಪೃಥ್ವಿರಾಜ್ ನಾಡಗೌಡ ಭೇಟಿ ನೀಡಿ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕರೆಮಾಡಿ ವಿಳಂಬ ಮಾಡದೇ ಪರಿಹಾರದ ಹಣ ಒದಗಿಸಬೇಕು ಎಂದರು.





