ವಿಜಯಪುರ | ಮನಗೂಳಿ ಬ್ಯಾಂಕ್ ದರೋಡೆ ಪ್ರಕರಣ: 15 ಮಂದಿ ಬಂಧನ

ವಿಜಯಪುರ, ಅ.9: ಕಳೆದ ಮೇ ತಿಂಗಳಲ್ಲಿ ನಡೆದಿದ್ದ ಮನಗೂಳಿ ಕೆನರಾ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ 15 ಮಂದಿಯನ್ನು ಬಂಧಿಸಲಾಗಿದ್ದು, ಹಾಗೇ ಮುದ್ದೇಬಿಹಾಳ ಪಟ್ಟಣದ ಹುಡೋ ಕಾಲನಿಯಲ್ಲಿ ಕಳೆದ ಆಗಸ್ಟ್ 24ರಂದು ಮುದ್ದೇಬಿಹಾಳ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಬಾಡಿಗೆ ಮನೆಯ ಬೀಗ ಮುರಿದು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಲಾಗಿದೆ ಎಂದು ಎಡಿಜಿಪಿ ಆರ್.ಹಿತೇಂದ್ರ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೇ ತಿಂಗಳಲ್ಲಿ ನಡೆದಿದ್ದ ಮನಗೂಳಿ ಕೆನರಾ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ 15 ಜನರನ್ನು ಬಂಧಿಸಲಾಗಿದ್ದು, 43.565 ಕೆಜಿ ಬಂಗಾರದ ಗಟ್ಟಿ ಹಾಗೂ ಆಭರಣಗಳು, 1.38 ಕೋಟಿ ರೂ. ನಗದು, ಕೃತ್ಯಕ್ಕೆ ಬಳಸಿದ ಐದು ಕಾರುಗಳು ಸೇರಿದಂತೆ 44.48 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ತನಿಖೆ ಮುಂದುವರಿದಿದ್ದು, ಪ್ರಕರಣದಲ್ಲಿ ದಸ್ತಗಿರಿಯಾದ ಆರೋಪಿಗಳಿಗೆ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ಆರೋಪಿತರು ನೀಡಿದ ಮಾಹಿತಿಯ ಮೇರೆಗೆ ಪುನಃ ಅವರಿಂದ 4.8 ಕೆ.ಜಿ. ಬಂಗಾರದ ಗಟ್ಟಿ ಮತ್ತು ಆಭರಣಗಳು ಹಾಗೂ 22 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಇನ್ನೂ ಒಬ್ಬ ಆರೋಪಿ ಪರಾರಿ ಇದ್ದು, ಆತನ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದರು.
ನ್ಯಾಯಾಧೀಶರ ಮನೆಯಲ್ಲಿ ಕಳ್ಳತನ: ಮೂವರ ಬಂಧನ
ಮುದ್ದೇಬಿಹಾಳ ಪಟ್ಟಣದ ಹುಡೋ ಕಾಲನಿಯಲ್ಲಿ ಕಳೆದ ಆಗಸ್ಟ್ 24 ರಂದು ಮುದ್ದೇಬಿಹಾಳ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಬಾಡಿಗೆ ಮನೆಯ ಬೀಗ ಮುರಿದು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬೆಳಗಾವಿ ಜಿಲ್ಲೆರಾಮದುರ್ಗ ನಿವಾಸಿ ಸುನೀಲ್ ರಜಪೂತ (28), ರಾಮದುರ್ಗ ಸಮೀಪದ ನಾಗನೂರ ತಾಮಡಾ ನಿವಾಸಿ ಚೇತನ ಪಾಂಡು ಲಮಾಣಿ (28) ಹಾಗೂ ಸವದತ್ತಿಯ ರಾಹುಲ್ ಪರಶುರಾಮ ಲಮಾಣಿ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 250 ಗ್ರಾಂ ಬಂಗಾರದ ಆಭರಣಗಳು, 50 ಗ್ರಾಂ ಬೆಳ್ಳಿಯ ಆಭರಣಗಳು, ಹಾಗೂ ಕೃತ್ಯ ಎಸಗಲು ಬಳಸಿದ 2 ಕಾರುಗಳು, 2 ಮೋಟರ್ ಸೈಕಲ್‌ಗಳು, 4 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.







