ಮುಂದಿನ ಬಜೆಟ್‌ನಲ್ಲಿ 500 ಕೆಪಿಎಸ್ ಶಾಲೆಗಳಿಗೆ ಅನುಮೋದನೆ : ಸಚಿವ ಮಧು ಬಂಗಾರಪ್ಪ

ಸಿಂದಗಿ, ಜ. 7: ಮುಂದಿನ ಬಜೆಟ್‌ನಲ್ಲಿ 500 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಅನುಮೋದಿಸುವ ಮೂಲಕ ಒಟ್ಟು 900 ಕೆಪಿಎಸ್ ಶಾಲೆಗಳಲ್ಲಿ ಎಲ್‌ಕೆಜಿಯಿಂದ ಪಿಯು ಹಂತದವರೆಗೆ ಗುಣಮಟ್ಟದ ಶಿಕ್ಷಣ ದೊರೆಯಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಪಟ್ಟಣದ ಬಸವನಗರದಲ್ಲಿನ ಸರಕಾರಿ ಕನ್ಯಾಪ್ರೌಢಶಾಲೆಯಲ್ಲಿ ಬುಧವಾರ ಶ್ರೀ ಎಂ.ಸಿ.ಮನಗೂಳಿ ಪ್ರತಿಷ್ಠಾನ(ರಿ) ವತಿಯಿಂದ ಮತಕ್ಷೇತ್ರದ ಪ್ರಥಮ ಹಂತದ 52 ಸರಕಾರಿ ಪ್ರಾಥಮಿಕ ಹಾಗೂ ಪ್ರೌಡ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳ ಉದ್ಘಾಟನಾ ಮತ್ತು ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಶೇ.38ರಷ್ಟು ಸರಕಾರಿ ನೌಕರರನ್ನು ಹೊಂದಿರುವ ದೊಡ್ಡ ಇಲಾಖೆ ಶಿಕ್ಷಣ ಇಲಾಖೆ. 46 ಸಾವಿರ ಸರಕಾರಿ ಶಾಲೆ ಹಾಗೂ ಅನುದಾನಿತ ಶಾಲೆಗಳಲ್ಲಿ ಒಟ್ಟು 56 ಲಕ್ಷ ಮಕ್ಕಳಿದ್ದಾರೆ. ಅಲ್ಲದೇ ಪಿಯುಸಿ ಹಂತದಲ್ಲಿ 1 ಕೋಟಿ 16 ಲಕ್ಷ ವಿದ್ಯಾರ್ಥಿಗಳು ಕಲೆಯುತ್ತಿದ್ದಾರೆ. ಸರಕಾರ ರಾಜ್ಯದ ಬಹುತೇಕ ಗ್ರಾಮ ಪ್ರದೇಶಗಳಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವ ಹಾಗು ಪ್ರೌಢಶಾಲೆಗಳ ಕೊರತೆ ನೀಗಿಸುವ ದಿಸೆಯಲ್ಲಿ ಹಳೆಯ 200 ಶಾಲೆಗಳ ಜತೆಗೆ 309 ಶಾಲೆಗಳನ್ನು ತೆರೆಯಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ 13 ಸಾವಿರ ಶಿಕ್ಷಕರ ನೇಮಕಾತಿಯಾಗಿದೆ. 10 ಸಾವಿರದ 800 ಸರಕಾರಿ ಮತ್ತು 6ಸಾವಿರ ಅನುದಾನಿತ ಶಾಲೆಗಳ ಶಿಕ್ಷಕರ ನೇಮಕವಾಗಲಿದ್ದು, ಜತೆಯಲ್ಲಿ 51ಸಾವಿರ ಅತಿಥಿ ಶಿಕ್ಷಕರನ್ನು ಹಾಗು ಕೆಪಿಎಸ್ ಶಾಲೆಗಳಲ್ಲಿ ದೈಹಿಕ ಹಾಗು ಸಂಗೀತ ಶಿಕ್ಷಕರ ಕೊರತೆಯನ್ನು ಸರಿದೂಗಿಸುವಲ್ಲಿಯೂ ಸರಕಾರ ಮುಂದಿನ ಶೈಕ್ಷಣಿಕ ಆರಂಭದೊಳಗೆ ನಿರ್ಣಯವನ್ನು ಮಂಡಿಸಲಿದೆ ಎಂದು ತಿಳಿಸಿದರು.
ಸರಕಾರ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರಾಥಮಿಕ ಹಾಗು ಪ್ರೌಢ ಶಾಲೆಗಳಂತೆ ಪಿಯುಸಿ ಹಂತಕ್ಕೂ ಉಚಿತ ಪುಸ್ತಕದೊಂದಿಗೆ ನೋಟ್ ಬುಕ್ ಹಾಗು ಮಧ್ಯಾಹ್ನದ ಬಿಸಿಯೂಟವನ್ನು ನೀಡಲು ಘೋಷಿಸುವ ಚಿಂತನೆಯನ್ನು ಸರಕಾರ ಮಾಡಿದೆ ಎಂದು ಹೇಳಿದರು.
ಸಿಂದಗಿ ಶಾಸಕ ಅಶೋಕ ಮನಗೂಳಿ ಮಾತನಾಡಿದರು. ಆಲಮೇಲದ ಗುರುಸಂಸ್ಥಾನ ಹಿರೇಮಠದ ಷ.ಬ್ರ.ಚಂದ್ರಶೇಖರ ಶಿವಾಚಾರ್ಯರು, ಸಿಂದಗಿ ಊರನ ಹಿರಿಯಮಠದ ಶಿವಾನಂದ ಶೀವಾಚಾರ್ಯರು, ಅರಕೇರಿಯ ಮುಮ್ಮಟಗುಡ್ಡದ ಅವಧೂತ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.







