ಸಿದ್ದರಾಮಯ್ಯನವರಿಗೆ ಶಕ್ತಿ ಪ್ರದರ್ಶನ ಮಾಡಲು ಅಧಿಕಾರವಿದೆ; ಡಿಕೆಶಿಗೆ ಶಕ್ತಿ ಇದ್ದರೆ ಪ್ರದರ್ಶಿಸಲಿ : ಯತ್ನಾಳ್

ವಿಜಯಪುರ : "ಸಿದ್ದರಾಮಯ್ಯ ಕಾಂಗ್ರೆಸ್ ಸಿಎಂ ಅಲ್ಲ, ಅವರು ರಾಜ್ಯದ ಮುಖ್ಯಮಂತ್ರಿ. ಮುಖ್ಯಮಂತ್ರಿ ನಮ್ಮ ಕ್ಷೇತ್ರಕ್ಕೆ ಬಂದಾಗ ಗೌರವ ಸಲ್ಲಿಸಬೇಕು. ಹೀಗಾಗಿ ನಾನು ಗೌರವ ಸಲ್ಲಿಸಿದ್ದೇನೆ. ಇದರಿಂದ ಕೆಲವರಿಗೆ ನೋವಾದರೆ ನಾನೇನು ಮಾಡಲು ಆಗುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಮತ ಕ್ಷೇತ್ರಕ್ಕೆ ಬಂದಿದ್ದಾರೆ. ಅವರಿಗೆ ನಾನು ಗೌರವ ನೀಡಿದ್ದೇನೆ. ಇದಕ್ಕೆ ಕೆಲವರಿಗೆ ನೋವಾದರೆ ನಾನೇನು ಮಾಡೋಕಾಗಲ್ಲ. ನಾನು ಸಿದ್ದರಾಮಯ್ಯ ಅವರಿಗೆ ಗೌರವ ನೀಡಿದಂತೆ ಕಾಂಗ್ರೆಸ್‌ನವರು ಸಹ ಪ್ರಧಾನಿಗೆ ಗೌರವ ನೀಡುತ್ತಾರೆ ಎಂದರು.
ರಾಜಕಾರಣಕ್ಕೆ ಶಕ್ತಿ ಪ್ರದರ್ಶನ ಅನಿವಾರ್ಯ :
ರಾಜಕಾರಣ ಹೇಗಿದೆ ಎಂದರೆ, ಶಕ್ತಿ ಪ್ರದರ್ಶನ ಇಂದು ಅನಿವಾರ್ಯವಾಗಿದೆ. ಅದನ್ನು ಮಾಡದಿದ್ದರೆ ನಾಯಕತ್ವವನ್ನು ಗುರುತಿಸುವುದು ಸಾಧ್ಯವಾಗುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶಕ್ತಿ ಪ್ರದರ್ಶನ ಮಾಡಲು ಅಧಿಕಾರವಿದೆ. ಡಿ.ಕೆ.ಶಿವಕುಮಾರ್ ಅವರಿಗೂ ಶಕ್ತಿ ಇದ್ದರೆ ಪ್ರದರ್ಶಿಸಲಿ. ಉತ್ತರ ಕರ್ನಾಟಕದಲ್ಲಿ ಡಿ.ಕೆ.ಶಿವಕುಮಾರ್ ಶಕ್ತಿ ಪ್ರದರ್ಶನ ಮಾಡಲಿ ನೋಡೋಣ ಎಂದು ಯತ್ನಾಳ್ ಸವಾಲು ಹಾಕಿದರು.
ಅಲ್ಲದೆ, ವಿಜಯಪುರಕ್ಕೆ ಉಪಮುಖ್ಯಂತ್ರಿ ಡಿ.ಕೆ.ಶಿವಕುಮಾರ್ ಅವರು ಬಂದು ಅವಮಾನ ಮಾಡಿಸಿಕೊಂಡು ಹೋಗಿದ್ದಾರೆ ಪುಣ್ಯಾತ್ಮ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಬಿಜೆಪಿ ರಾಜಾಧ್ಯಕ್ಷ ಆಯ್ಕೆ ವಿಳಂಬ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಯತ್ನಾಳ್ ಅವರು, ಬಿಜೆಪಿ ಹೈಕಮಾಂಡ್ ನಾಯಕರಿಗೆ ಎಲ್ಲವೂ ಗೊತ್ತಿದೆ. ಯಾರಿಗೆ ಯಾವಾಗ ಏನು ಕೊಡಬೇಕು ಎಂದು ಗೊತ್ತಿದೆ. ಎಲ್ಲವನ್ನೂ ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದಿದ್ದಾರೆ.
ಮುಖ್ಯಮಂತ್ರಿಗಳ ಎದುರು ಜನ ನನ್ನ ಪರ ಕೂಗಿದ್ದು ಕಾಂಗ್ರೆಸ್, ಬಿಜೆಪಿಗೆ ಎಚ್ಚರಿಕೆ ಗಂಟೆಯಾಗಿದೆ. ಜನರು ನನ್ನನ್ನು ಬೆಂಬಲಿಸಿದ್ದಾರೆ. ಅದು ನನ್ನ ಮೇಲಿರುವ ಅಭಿಮಾನ. ಜನರ ಪ್ರೀತಿ, ವಿಶ್ವಾಸಕ್ಕೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದರು.







