ವಿರಕ್ತ ಮಠದ ಪೀಠಾಧಿಪತಿ ಚನ್ನಬಸವ ಶ್ರೀ ನಿಧನ

ವಿಜಯಪುರ: ನಡೆದಾಡುವ ಬಸವೇಶ್ವರ ಎಂದೇ ಖ್ಯಾತರಾಗಿದ್ದ ಇಂಗಳೇಶ್ವರ ವಚನಶಿಲಾ ಮಂಟಪದ ನಿರ್ಮಾತೃ ಆಗಿದ್ದ ವಿರಕ್ತಮಠದ ಪೀಠಾಧಿಪತಿ ಚನ್ನಬಸವ ಶ್ರೀ (93) ನಿಧನರಾಗಿದ್ದಾರೆ.
1932 ರಲ್ಲಿ ಅವಿಭಜಿತ ವಿಜಯಪುರ ಜಿಲ್ಲೆಯ ಬಿಳಗಿ ತಾಲೂಕಿನ ನಾಗರಾಳ ಗ್ರಾಮದಲ್ಲಿ ಹುಚ್ಚಮ್ಮ ಹಾಗೂ ವೀರಯ್ಯ ದಂಪತಿಯ ಪುತ್ರರಾಗಿ ಜನಿಸಿದ್ದರು.
ಬಾಗಲಕೋಟೆಯ ಟೀಕಿನಮಠ ಹಾಗೂ ಧಾರವಾಡ ಮುರುಘಾ ಮಠದಲ್ಲಿ ಗುರುಕುಲ ಪದ್ಧತಿಯಲ್ಲಿ ಮೃತ್ಯುಂಜಯ ಶ್ರೀಯವರ ಸೇವೆಯೊಂದಿಗೆ ಸಂಸ್ಕೃತದಲ್ಲಿ ಶಿಕ್ಷಣ ಪಡೆದು, ಭಾಷಾ ಪಾಂಡಿತ್ಯ ಪಡೆದಿದ್ದರು.
ಈ ಹಂತದಲ್ಲೇ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ವಿರಕ್ತಮಠದ ಸಿದ್ಧಲಿಂಗ ಶ್ರೀಯವರ ಉತ್ತರಾ ಉತ್ತರಾಧಿಕಾರಿ ಚನ್ನಬಸವ ಶ್ರೀ, 1948 ರಲ್ಲಿ ಪೀಠಾಧಿಕಾರಿಯಾಗಿ ನಿಯೋಜಿಸುತ್ತಾರೆ. ಬಳಿಕ ಮುದ್ದೇಬಿಹಾಳದ ಖಾಸ್ಗತೇಶ್ವರ ಮಠದ ಗುರುಗಳಿಂದ ತಮ್ಮ 16ನೇ ವಯಸ್ಸಿನಲ್ಲಿ ಪಟ್ಟಾಧಿಕಾರದ ದೀಕ್ಷೆ ಪಡೆಯುತ್ತಾರೆ. ದೀಕ್ಷೆಯ ಬಳಿಕ ತಮ್ಮ ಗುರುಗಳ ಆಶಯದಂತೆ ಬಸವತತ್ವ ಪ್ರಸಾರಕ್ಕೆ ತಮ್ಮನ್ನು ಮುಡಿಪಾಗಿ ಇರಿಸಿಕೊಂಡ ಶ್ರೀಗಳು ಇಂಗಳೇಶ್ವರ ವಿರಕ್ತ ಶ್ರೀ ಮಠದಲ್ಲಿ ಸಜ್ಜಕ-ತುಪ್ಪದ ನಿತ್ಯ ದಾಸೋಹಕ್ಕೆ ಚಾಲನೆ ನೀಡಿದ್ದು, ಇಂದಿಗೂ ಮುಂದುವರಿದಿದೆ.
ಪೀಠಾಧಿಪತಿಯಾದ ಮೂರೇ ವರ್ಷಕ್ಕೆ ಅಂದರೆ 1951ರಲ್ಲಿ ಮೊಟ್ಟಮೊದಲ ಬಾರಿಗೆ ಇಂಗಳೇಶ್ವರ ಗ್ರಾಮದಿಂದ ಅಥಣಿಗೆ ಪಾದಯಾತ್ರೆ ಆರಂಭಿಸಿದ್ದ ಅವರು, 2018 ರಲ್ಲಿ ಎರಡನೇ ಬಾರಿಗೆ ಸಿದ್ಧಲಿಂಗೇಶ್ವರರ ಪುಣ್ಯಕ್ಷೇತ್ರವಾದ ಯಡಿಯೂರಿಗೆ ಪಾದಯಾತ್ರೆ ನಡೆಸಿದ್ದಾರೆ. ಸುದೀರ್ಘ ಸುಮಾರು ಏಳು ದಶಕಗಳ ಅವಧಿಯಲ್ಲಿ 37 ಬಾರಿ ಭಾರತದ ವಿವಿಧ ಧರ್ಮ ಕ್ಷೇತ್ರಗಳಿಗೆ ಪಾದಯಾತ್ರೆ ನಡೆಸಿದ್ದರು.
ಗಣ್ಯರಿಂದ ಸಂತಾಪ:
ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಎಂ.ಬಿ ಪಾಟೀಲ, ಸಕ್ಕರೆ ಸಚಿವ ಶಿವಾನಂದ ಪಾಟೀಲ, ಇಂಡಿಯ ಶಾಸಕ ಯಸವಂತರಾಯಗೌಡ ಪಾಟೀಲ, ಮುದ್ದೇಬಿಹಾಳ ಶಾಸಕ ಅಪ್ಪಾಜಿ ನಾಡಗೌಡ, ದೇವರ ಹಿಪ್ಪರಗಿಯ ಶಾಸಕ ರಾಜುಗೌಡ ಬಿರಾದಾರ, ಸಿಂದಗಿ ಅಶೋಕ ಮನಗೂಳಿ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಬಿಜೆಪಿ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಲೋಣಿ, ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್ ಮುಂತಾದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಇಂಗಳೇಶ್ವರ ವಿರಕ್ತ ಮಠದ ಚನ್ನಬಸವ ಮಹಾಸ್ವಾಮಿಗಳು ಲಿಂಗೈಕ್ಯರಾದ ಸುದ್ದಿ ತಿಳಿದು ದುಃಖವಾಯಿತು.
— Siddaramaiah (@siddaramaiah) December 11, 2025
ಇಂಗಳೇಶ್ವರದ ವಚನ ಶಿಲಾಶಾಸನ ಮಂಟಪದಲ್ಲಿ ಕಲ್ಲುಗಳ ಮೇಲೆ ವಚನಗಳನ್ನು ಕೆತ್ತಿಸಿ, ಶರಣರ ಪರಂಪರೆ ಹಾಗೂ ವಿಚಾರಧಾರೆಯನ್ನು ಸಮಾಜಕ್ಕೆ ಸಾರುವ ಕಾರ್ಯವನ್ನು ನಿಸ್ವಾರ್ಥದಿಂದ ಮಾಡುತ್ತಾ ಬಂದವರು.… pic.twitter.com/dQWISmyZ2P







