ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ; ಒಂದು ವಾರದೊಳಗೆ ಭೂ ಪರಿಹಾರಕ್ಕೆ ದರ ನಿಗದಿ : ಸಿಎಂ ಸಿದ್ದರಾಮಯ್ಯ

ವಿಜಯಪುರ : ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತಕ್ಕೆ ಸಂಬಂಧಿಸಿದಂತೆ ಮುಂದಿನ ವಾರದೊಳಗೆ ಸಭೆ ಕರೆದು ಭೂ ಪರಿಹಾರಕ್ಕೆ ದರ ನಿಗದಿ ಮಾಡಲಾಗುವುದು. ರೈತರು ಯಾರೂ ಪರಿಹಾರ ಕೊಡಿ ಎಂದು ನ್ಯಾಯಾಲಯಕ್ಕೆ ಹೋಗಬಾರದು. ಇದರಿಂದ ವಿಳಂಬವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.
ಆಲಮಟ್ಟಿಯಲ್ಲಿ ಜಲಸಂಪನ್ಮೂಲ ಇಲಾಖೆ ಹಾಗೂ ಕೃಷ್ಣ ಜಲ ಭಾಗ್ಯ ನಿಗಮ ನಿ. ವತಿಯಿಂದ ಆಯೋಜಿಸಲಾಗಿದ್ದ ಲಾಲ್ ಬಹುದ್ದೂರ್ ಶಾಸ್ತ್ರೀ ಸಾಗರದ ಕೃಷ್ಣೆಯ ಜಲಧಿಗೆ ಗಂಗಾಪೂಜೆ ಹಾಗೂ ಬಾಗಿನವನ್ನು ಅರ್ಪಣೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ರೈತ ಹೋರಾಟಗಾರರೊಂದಿಗೆ ಹಿಂದೆಯೇ ಬೆಳಗಾವಿಯಲ್ಲಿ ಸಭೆ ನಡೆಸಿತ್ತು. ಅಲ್ಲಿ ಎಲ್ಲರೂ ಒಪ್ಪಿಗೆ ನೀಡಿ ಎಂದಿರುವ ಹಿನ್ನೆಲೆಯಲ್ಲಿ ಸರ್ಕಾರವೂ ಒಪ್ಪಿಕೊಂಡಿದೆ. ಉಪಮುಖ್ಯಮಂತ್ರಿಗಳು ಇತ್ತೀಚೆಗೆ ಈ ಭಾಗದ ರೈತರು, ಶಾಸಕರೊಂದಿಗೆ ಸಭೆ ಕರೆದು ಚರ್ಚಿಸಿದ್ದು , ಒಪ್ಪಿಗೆ ಆದೇಶ ನೀಡುವುದು ಒಂದು ಹಂತಕ್ಕೆ ಬಂದಿದೆ. ಎಲ್ಲರ ಒಪ್ಪಿಗೆಯ ಮೇಲೆ ಒಪ್ಪಂದ ಮಾಡಿಕೊಳ್ಳಲಾಗುವುದು. ಮುಂದಿನ ವಾರದೊಳಗೆ ಈ ಬಗ್ಗೆ ಇತ್ಯರ್ಥ ಮಾಡಲಾಗುವುದು ಎಂದರು.
ಗೆಜೆಟ್ ಅಧಿಸೂಚನೆಯಾದರೆ ಅಣೆಕಟ್ಟು ಎತ್ತರಿಸಲು ಅನುಕೂಲ :
ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದಲ್ಲಿ 519.6 ಮೀ. ರಿಂದ 524.25 ಮೀಟರ್ ಗೆ ಎತ್ತರಿಸುವುದರಿಂದ 130 ಟಿಎಂಸಿ ನೀರನ್ನು ಸಂಗ್ರಹ ಮಾಡಿಕೊಳ್ಳಬಹುದಾಗಿದ್ದು, ಅದನ್ನು ಬಳಕೆ ಮಾಡಲು ಅನುಕೂಲವಾಗಲಿದೆ. 173 ಟಿಎಂಸಿ ನೀರನ್ನು 6.6 ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಬಹುದಾಗಿದೆ. ಮೂರನೇ ಹಂತದ ಬಗ್ಗೆಯೂ ತೀರ್ಮಾನವಾಗಿದ್ದು, ಗೆಜೆಟ್ ಅಧಿಸೂಚನೆಯಾಗಿಲ್ಲ. ಇದಾದರೆ ನೀರಾವರಿ ಹಾಗೂ ಅಣೆಕಟ್ಟು ಎತ್ತರಿಸುವ ಕೆಲಸಗಳು ಆಗಲು ಅನುಕೂಲವಾಗಲಿದೆ ಎಂದರು.
ನೀರಾವರಿ ನಮ್ಮ ಆದ್ಯತಾ ವಲಯ :
ಈ ವಿಚಾರಗಳ ಬಗ್ಗೆ ಮೂರು ಬಾರಿ ಸಂಬಂಧಪಟ್ಟ ಕೇಂದ್ರ ಸಚಿವರು ಹಾಗೂ ಪ್ರಧಾನಿಗಳನ್ನು ಭೇಟಿ ಮಾಡಲಾಗಿದೆ. ಉಪಮುಖ್ಯಮಂತ್ರಿ ಐದು ಬಾರಿ ಭೇಟಿಯಾಗಿದ್ದಾರೆ. ನೀರಾವರಿ ನಮ್ಮ ಆದ್ಯತಾ ವಲಯ. ರೈತರಿಗೆ ಅನುಕೂಲವಾಗಬೇಕು. ರೈತರ ಜಮೀನುಗಳಿಗೆ ನೀರು ದೊರೆತು, ರೈತರ ಉತ್ಪನ್ನಗಳು ಹೆಚ್ಚಾಗಬೇಕು ಹಾಗೂ ಅವರ ಬದುಕು ಹಸನಾಗಬೇಕು ಎನ್ನುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಹಂತಹಂತವಾಗಿ ಸ್ಥಾಪನೆ :
ವಿಜಯಪುರ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಸ್ಥಾಪಿಸುವ ಗುರಿಯಿದೆ. ಹಂತಹಂತವಾಗಿ ಈ ಗುರಿಯನ್ನು ಸಾಧಿಸಲಾಗುವುದು,. 2025-26 ನೇ ಬಜೆಟ್ ನಲ್ಲಿ ಬಾಗಲಕೋಟೆ, ಮಂಗಳೂರು, ಕೋಲಾರ ನಂತರ ವಿಜಯಪುರದಲ್ಲಿಯೂ ವೈದ್ಯಕೀಯ ಕಾಲೇಜು ಸ್ಥಾಪಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಕರ್ನಾಟಕ ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯ ಯೋಜನೆ ಹಮ್ಮಿಕೊಂಡಿದ್ದು, ಕೇಂದ್ರ ಸರಕಾದ ಮಾರ್ಗಸೂಚಿಯಂತೆ ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಕಾಲೇಜು ನಿರ್ಮಿಸಿ, ಸರಕಾರಿ ದರದಲ್ಲಿ ಚಿಕಿತ್ಸೆ ನೀಡಬೇಕೆಂದು ಸೂಚನೆಯಂತೆ , ಅದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆ; ಬಿಜೆಪಿಯಿಂದ ರಾಜಕೀಯಪ್ರೇರಿತ ವಿರೋಧ :
ನಾಡಹಬ್ಬ ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರ ಆಯ್ಕೆಯನ್ನು ವಿರೋಧಿಸಿ, ಮಾಜಿ ಸಂಸದ ಪ್ರತಾಪ್ ಸಿಂಹ ಹೈಕೋರ್ಟ್ ಮೆಟ್ಟಿಲೇಲಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ವಿಷಯವನ್ನು ಕೋರ್ಟ್ ತೀರ್ಮಾನಿಸಲಿ, ಆದರೆ ಈ ಹಿಂದೆ ಸಾಹಿತಿ ನಿಸಾರ್ ಅಹ್ಮದ್ ಅವರು ಉದ್ಘಾಟಿಸುವುದನ್ನು ಯಾರು ವಿರೋಧಿಸಿರಲಿಲ್ಲ. ಟಿಪ್ಪು ಸುಲ್ತಾನ್ , ಮಿರ್ಜಾ ಇಸ್ಮಾಯಿಲ್ ಮೆರವಣಿಗೆಗಳನ್ನು ಏಕೆ ವಿರೋಧಿಸಲಿಲ್ಲ. ಬಿಜೆಪಿಯವರು ರಾಜಕೀಯ ದುರುದ್ದೇಶದಿಂದ ನಾಡಹಬ್ಬ ಉದ್ಘಾಟಿಸುವುದನ್ನು ವಿರೋಧಿಸುತ್ತಿದ್ದು, ಸರ್ಕಾರ ರಾಜಕೀಯವಾಗಿಯೇ ಪ್ರತ್ಯುತ್ತರ ನೀಡಲಿದೆ. ಬಾನು ಮುಷ್ತಾಕ್ ಅವರು ಕನ್ನಡಾಂಬೆಯ ಬಗ್ಗೆ ಹೀಗಳೆದು ಮಾತನಾಡಿರುವ ಬಗ್ಗೆ ಯಾವ ಪುರಾವೆಯಿಲ್ಲ. ಅವರು ಕನ್ನಡದಲ್ಲಿ ಬರೆದ ಕೃತಿಯ ಅನುವಾದಕ್ಕೆ ಬೂಕರ್ ಪ್ರಶಸ್ತಿ ಬಂದಿದೆ. ಆದ್ದರಿಂದ ರಾಜ್ಯ ಸರ್ಕಾರ ಸಾಹಿತಿಗಳಾದ ಬಾನು ಮುಷ್ತಾಕ್ ಹಾಗು ಅನುವಾದಿಸಿದ ದೀಪಾ ಬಸ್ತಿಯವರಿಗೆ ಸನ್ಮಾನಿಸಲಾಗಿದೆ. ಬಾನು ಮುಷ್ತಾಕ್ ಅವರು ಕನ್ನಡ ಸಾಹಿತಿಯಾಗಿರುವ ಕಾರಣ ಅವರಿಂದ ದಸರಾವನ್ನು ಉದ್ಘಾಟಿಸಲಾಗುತ್ತಿದೆ ಎಂದರು.
ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆಗೆ ಶಿಫಾರಸು :
ಇವಿಎಂಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದಿಂದ ಮತದಾನವನ್ನು ತಿರುಚಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿರುವ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ಇವಿಎಂನ ಗೊಂದಲ ಹಾಗೂ ತಕರಾರುಗಳಿಗೆ ಆಸ್ಪದ ನೀಡದಿರಲು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲಾಗುವುದು. ಪ್ರಪಂಚದ ವಿವಿಧ ದೇಶಗಳಲ್ಲಿ ಇವಿಎಂ ವ್ಯವಸ್ಥೆಯನ್ನು ತೊರೆದು, ಪುನ: ಮತಪತ್ರಗಳಿಗೆ ಮೊರೆ ಹೋಗಿವೆ ಎಂದು ತಿಳಿಸಿದರು.







