ಕೊಯಮತ್ತೂರು ಬಾಂಬ್ ಸ್ಫೋಟ ಪ್ರಕರಣ | ಪ್ರಮುಖ ಆರೋಪಿ ವಿಜಯಪುರದಲ್ಲಿ ಸೆರೆ

ಸಾಂದರ್ಭಿಕ ಚಿತ್ರ | PC : freepik
ವಿಜಯಪುರ: ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ 1998ರ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯೊಬ್ಬನನ್ನು ಪೊಲೀಸರು ವಿಜಯಪುರದಲ್ಲಿ ಬಂಧಿಸಿರುವುದಾಗಿ ವರದಿಯಾಗಿದೆ.
ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸಾದಿಕ್ ರಾಜಾ ಅಲಿಯಾಸ್ ಟೈಲರ್ ರಾಜಾ ಅಲಿಯಾಸ್ ಶಹಜಹಾನ್ ಅಬ್ದುಲ್ ಮಜೀದ್ ಮಕಾಂದರ್ ಅಲಿಯಾಸ್ ಶಹಜಹಾನ್ ಶೇಖ್ (50) ಎಂಬಾತನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೂಲತಃ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ನಿವಾಸಿಯಾಗಿದ್ದ ಸಾದಿಕ್ ರಾಜಾ, ಕೊಯಮತ್ತೂರು ಸ್ಫೋಟ ಪ್ರಕರಣದ ಬಳಿಕ ಹುಬ್ಬಳ್ಳಿ ಮತ್ತು ವಿಜಯಪುರ ನಗರದಲ್ಲಿ ಕಳೆದ 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
ಪ್ರಕರಣದ ತನಿಖೆ ಸಂಬಂಧ ತಮಿಳುನಾಡು ಪೊಲೀಸರು ಆರೋಪಿಯನ್ನು ಕೊಯಮತ್ತೂರಿಗೆ ಕರೆದೊಯ್ದು, ಕೋರ್ಟ್ಗೆ ಹಾಜರು ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಏನಿದು ಕೊಯಮತ್ತೂರು ಬಾಂಬ್ ಸ್ಫೋಟ ಪ್ರಕರಣ?
1998 ಫೆ.14ರಂದು ಅಡ್ವಾಣಿ ಅವರು ಕೊಯಮತ್ತೂರಿಗೆ ಚುನಾವಣಾ ಸಭೆಗೆ ಬಂದಿದ್ದರು. ಅಡ್ವಾಣಿ ಅವರ ಹತ್ಯೆಯ ಸಂಚಿನ ಭಾಗವಾಗಿ ಅವರು ಬರುವ ಸಮಯದಲ್ಲಿ ಕೊಯಮತ್ತೂರಿನ 12 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸರಣಿ ಬಾಂಬ್ ಸ್ಫೋಟಗೊಂಡು 58 ಜನ ಮೃತರಾಗಿದ್ದರು. 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಪೊಲೀಸರ ಮುಂಜಾಗ್ರತೆಯಿಂದ ಎಲ್.ಕೆ ಅಡ್ವಾಣಿ ಪ್ರಾಣಾಪಾಯದಿಂದ ಪಾರಾಗಿದ್ದರು.







