ಪಂಚ ಗ್ಯಾರಂಟಿ ಯೋಜನೆಗಳು ನಾಡಿನ ಜನತೆಗೆ ಆಶಾಕಿರಣ : ವಿಠ್ಠಲ ಕಟಕದೊಂಡ

ವಿಜಯಪುರ, ಮೇ.12: ನಮ್ಮ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ನೇರವಾಗಿ ಜನರನ್ನು ತಲುಪುತ್ತಿವೆ. ಹಾಗಾಗಿ ಐದು ಗ್ಯಾರಂಟಿ ಯೋಜನೆಗಳು ನಾಡಿನ ಬಡವರು, ದೀನ-ದುರ್ಬಲರ ಬದುಕಿಗೆ ಆಶಾಕಿರಣವಾಗಿವೆ ಎಂದು ನಾಗಠಾಣ ಶಾಸಕ ವಿಠ್ಠಲ ದೊಂಡಿಬಾ ಕಟಕದೊಂಡ ಹೇಳಿದರು.
ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ 32 ಫಲಾನುಭವಿಗಳಿಗೆ ಇಂಧನ ಚಾಲಿತ ತ್ರಿಚಕ್ರವಾಹನ ಕೀ ಹಸ್ತಾಂತರಿಸಿ ಅವರು ಮಾತನಾಡಿದರು.
ನಮ್ಮ ಸರ್ಕಾರ ಜನರ ಹಿತದಿಂದ ಇಂತಹ ಜನಪ್ರಿಯ ಹಾಗೂ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಸಾರ್ವಜನಿಕರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ನಮ್ಮ ಸಂವಿಧಾನವು ಎಲ್ಲರ ಏಳಿಗೆಗೆ ವಿಶೇಷ ಅವಕಾಶ ಕಲ್ಪಿಸಿದೆ. ಈ ಸಂವಿಧಾನದಡಿ ವಿಕಲಚೇತನರಿಗೆ ಸಾಕಷ್ಟು ಸೌಲಭ್ಯಗಳಿವೆ. ಈ ಪೈಕಿ ನಿಮಗೆ ತ್ರಿಚಕ್ರ ವಾಹನ ಸೌಲಭ್ಯ ನೀಡಲಾಗುತ್ತದೆ. ಈ ಸೌಲಭ್ಯದಿಂದ ವಿಕಲಚೇತನರಿಗೆ ಬಹಳಷ್ಟು ಅನುಕೂಲವಾಗುವುದು ಎಂದರು.
ವಿಕಲಚೇತನರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ತ್ರಿ ಚಕ್ರವಾಹನ ನೀಡಲಾಗುತ್ತಿದೆ. ಜೊತೆಗೆ ನಿಮ್ಮ ಆತ್ಮವಿಶ್ವಾಸ ಇಮ್ಮಡಿಗೊಳಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ. ಶಾಸಕರ ಅನುದಾನದಡಿ ನಿಯಮಾನುಸಾರ ಅರ್ಜಿ ಸಲ್ಲಿಸಿದವರಿಗೆ ವಿಕಲಚೇತನರಿಗೆ ವಾಹನ ನೀಡಲಾಗುತ್ತದೆ. ಈ ಯೋಜನೆಗಳ ಬಗ್ಗೆ ತಿಳಿದುಕೊಂಡು ಅವುಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಚಡಚಣ ವಿಭಾಗದ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ರವಿದಾಸ ಜಾಧವ ಮಾತನಾಡಿ, ಈ ಕ್ಷೇತ್ರದ ವಿಕಲಚೇತನ 32 ಜನರಿಗೆ ತ್ರಿಚಕ್ರ ವಾಹನ ನೀಡಿದ್ದು, ವಿಶೇಷಚೇತನರಿಗಿರುವ ಸರ್ಕಾರದ ಸೌಲಭ್ಯ ಉಪಯೋಗಿಸಿಕೊಳ್ಳಿ ಎಂದರು.
ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ , ವಿಜಯಪುರದ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ರಾಜಶೇಖರ್ ಅವಜಿ, ಪಾಲಿಕೆ ಸದಸ್ಯ ಶಫೀಕ್ ಮನಗೂಳಿ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಲೀಂ ಪೀರಜಾದೆ, ಸಂತೋಷ ಪಾಟೀಲ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಜಗದೀಶ, ಕ್ರೀಡಾಧಿಕಾರಿ ರಾಜಶೇಖರ ಧೈವಾಡಿ ಸೇರಿದಂತೆ ಮುಂತಾದವರು ಇದ್ದರು






