ದಲಿತ ವ್ಯಕ್ತಿ ಮುಖ್ಯ ಚುನಾವಣಾ ಆಯುಕ್ತರಾಗಿರುವುದು ಕಾಂಗ್ರೆಸ್‌ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ : ಗೋವಿಂದ ಕಾರಜೋಳ

ವಿಜಯಪುರ : ʼಅಲ್ಪಸಂಖ್ಯಾತರು ಹಾಗೂ ದಲಿತರು ಕೇವಲ ಕಾಂಗ್ರೆಸ್‌ಗೆ ವೋಟ್ ಬ್ಯಾಂಕ್ ಆಗಿದ್ದಾರೆ. ನಿಜಕ್ಕೂ ಈ ದೇಶದ ಮುಸಲ್ಮಾನರಿಗೆ ಹಾಗೂ ದಲಿತರಿಗೆ ಅನ್ಯಾಯವಾಗಿರುವುದು ಕಾಂಗ್ರೆಸ್‌ನಿಂದಲೇ. ಮುಸ್ಲಿಮರು ಉನ್ನತ ಹುದ್ದೆಗೆ ಏರುವುದು ಕಾಂಗ್ರೆಸ್‌ಗೆ ಇಷ್ಟವಿಲ್ಲ. ದಲಿತರು ಅಷ್ಟೇ ಅಲ್ಲ, ಮುಸಲ್ಮಾನರೂ ಉನ್ನತ ಹುದ್ದೆಯಲ್ಲಿರಬಾರದು ಎನ್ನುವುದು ಕಾಂಗ್ರೆಸ್‌ನ ಕೀಳುಮಟ್ಟದ ಮನಸ್ಥಿತಿʼ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಡಿದ ಅವರು, ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಂದ್ರ ಕುಮಾರ್ ಓರ್ವ ದಲಿತ ಪ್ರತಿಭಾವಂತ ಅಧಿಕಾರಿ. ಓರ್ವ ದಲಿತ ವ್ಯಕ್ತಿ ಮುಖ್ಯ ಚುನಾವಣಾ ಆಯುಕ್ತರಾಗಿರುವುದು ಕಾಂಗ್ರೆಸ್‌ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ, ಹೀಗಾಗಿ ಅವರ ಮೇಲೆ ಆಧಾರ ರಹಿತ ಆರೋಪ ಮಾಡುತ್ತಿದೆ ಎಂದರು.
ಚುನಾವಣಾ ಆಯೋಗದ ಆಯುಕ್ತರ ಮೇಲೆ ವಿನಾಕಾರಣ ಆರೋಪ ಹೊರಿಸುವ ಮೂಲಕ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ಇರಿಸುವ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡುವಲ್ಲಿ ತೊಡಗಿದ್ದಾರೆ. ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿರದೇ ಹೋಗಿದ್ದರೆ ನೀವು ಹೇಗೆ ಗೆದ್ದಿರಿ? ನಿಮ್ಮ ಸಹೋದರಿ ವೈಯನಾಡಿನಲ್ಲಿ ಹೇಗೆ ಗೆದ್ದರು? ಎಂದು ಪ್ರಶ್ನಿಸಿದರು.
ಪ್ರತಿ ಜಿಲ್ಲೆಗೆ 100 ಕೋಟಿ ರೂ. ಪ್ಯಾಕೇಜ್ ಘೋಷಿಸಿ
ಬರ ನಿರ್ವಹಣೆಯನ್ನು ನಿಭಾಯಿಸುವಲ್ಲಿ ಸರಕಾರ ಯಾವ ತಯಾರಿಯೂ ಮಡಿಕೊಂಡಿಲ್ಲ, ನೀರಿಲ್ಲ, ವಿದ್ಯುತ್ ಇಲ್ಲ, ಮೇವಿಲ್ಲ, ಕೂಡಲೇ ಲೋಡಶೆಡ್ಡಿಂಗ್ ನಿಲ್ಲಿಸಿ. ವಿದ್ಯುತ್ ಸಮರ್ಪಕ ಪೂರೈಕೆಗೆ ಆದ್ಯತೆ ನೀಡಿ, ಕೂಡಲೇ ಪ್ರತಿ ಜಿಲ್ಲೆಗೆ 100 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು, ಇದರಲ್ಲಿ ಗೋಶಾಲೆ ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳಲು ಸಾಧ್ಯ ಎಂದು ಕಾರಜೋಳ ಹೇಳಿದರು.






