ವಿಜಯಪುರ | ಭೀಮಾ ತೀರದಲ್ಲಿ ಪ್ರವಾಹದಿಂದ ಹಲವು ಗ್ರಾಮಗಳು ಜಲಾವೃತ; ಆತಂಕದಲ್ಲಿ ಗ್ರಾಮಸ್ಥರು

ವಿಜಯಪುರ : ಜಿಲ್ಲಾದ್ಯಂತ ಎರಡು ದಿನದಿಂದ ಎಡಬಿಡದೆ ಸುರಿಯುತ್ತಿರುವ ಮಳೆಗೆ ಜನರು ತತ್ತರಿಸಿದ್ದು, ಇನ್ನೂ ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಕೃಷ್ಣಾ, ಭೀಮಾ ತೀರದಲ್ಲಿ ಭೀಕರ ಪ್ರವಾಹದ ಪರಿಸ್ಥಿತಿ ಉಂಟಾಗಿದೆ.
ಭೀಮಾ ತೀರದಲ್ಲಿ ಭೀಕರ ಪ್ರವಾಹದಿಂದ ಹಲವಾರು ಗ್ರಾಮಗಳು ಜಲಾವೃತಗೊಂಡಿವೆ. ಹಲವು ದಿನಗಳಿಂದ ನಿರಂತರವಾಗಿ ಭೀಮಾ ನದಿಯಲ್ಲಿ ಪ್ರವಾಹ ಹೆಚ್ಚುತ್ತಲೇ ಇದ್ದು, ನದಿ ತೀರದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.
ನದಿ ತೀರದ ಗ್ರಾಮಗಳಾದ ದೇವಣಗಾಂವ, ತಾವರಖೇಡ, ಬ್ಯಾಡಗಿಹಾಳ, ಕುಮಸಗಿ, ಶೇಂಬೆವಾಡ, ಕಡ್ಲೆವಾಡ, ಶಿರಸಗಿ ಗ್ರಾಮಕ್ಕೆ ನೀರು ಆವರಿಸಿ ಕೆಲ ಮನೆಗಳಿಗೆ ನೀರು ಸುತ್ತುವರೆದು ಜಲಾವೃತಗೊಂಡಿದೆ. ಸಂತ್ರಸ್ತ ಕುಟುಂಬಗಳನ್ನು ಸ್ಥಳಾಂತರಿಸಲಾಗುತ್ತಿದೆ.
ತಾರಾಪೂರ, ತಾವರಖೇಡ, ಕುಮಸಗಿ ಮೂರು ಗ್ರಾಮಗಳಲ್ಲಿ ಕಾಳಜಿ ಕೇಂದ್ರ ಆರಂಭಿಸಲಾಗಿದೆ. ಆಲಮೇಲ ತಾಲೂಕಿನಲ್ಲಿ ಕುಮಸಗಿ ಗ್ರಾಮದ 30ಕ್ಕೂ ಅಧಿಕ ಮನೆಗಳು ಸಂಪೂರ್ಣ ಜಲಾವೃತವಾಗಿದ್ದು, ಮನೆಗಳಲ್ಲಿದ್ದ ಬೆಲೆಬಾಳುವ ವಸ್ತುಗಳು ಪಡಿತರ ಸಾಮಗ್ರಿಗಳು ನೀರಲ್ಲಿ ಕೊಚ್ಚಿ ಹೋಗಿವೆ. ಜನ ಮನೆಗಳನ್ನು ಬಿಟ್ಟು ಗಂಜಿ ಕೇಂದ್ರಗಳಿಗೆ ಸ್ಥಳಾಂತರ ಆಗಿದ್ದಾರೆ.
ಅಲ್ಲದೇ, ತಾವರಖೇಡ ಗ್ರಾಮದಲ್ಲಿ ಸುತ್ತುವರಿದ ಭೀಮಾ ನದಿಯ ನೀರಿನಲ್ಲಿ ಸಿಲುಕಿದ ಎಂಟು ಜನರನ್ನು ಸಿಂದಗಿ ಅಗ್ನಿಶಾಮಕ ಸಿಬ್ಬಂದಿಗಳಿಂದ ರಕ್ಷಣೆ ಮಾಡಿದ್ದಾರೆ.
ವಿಜಯಪುರ ನಗರದಲ್ಲಿ ನಿರಂತರ ಸುರಿಯುತ್ತಿರುವ ಮಳೆಗೆ ಜನ ಜೀವನ ತತ್ತರಿಸಿದೆ. ಜನರು ಮನೆಯಿಂದ ಹೋರಗೆ ಬಾರದ ಪರಿಸ್ಥಿತಿ ನಿರ್ಮಾಣ ಆಗಿದೆ.







