ವಿಜಯಪುರ ಜಿಲ್ಲೆಯಲ್ಲಿ ಭಾರೀ ಮಳೆ; 47 ಮನೆಗಳು ಹಾನಿ, ಹಲವು ಗ್ರಾಮಗಳು ಜಲಾವೃತ

ವಿಜಯಪುರ : ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, 43 ಮೀ.ಮೀ.ಮಳೆ ಸುರಿದಿದೆ. ತೀವ್ರ ಮಳೆಯಿಂದಾಗಿ ಅನೇಕ ಮನೆಗಳಿಗೆ ಹಾನಿಯಾಗಿದೆ.
ಅತ್ತ ಡೋಣಿ, ಭೀಮಾ ನದಿ ಪ್ರವಾಹ ತಗ್ಗಿದ್ದರೂ ಸಹ ಅನೇಕ ಗ್ರಾಮಗಳು ಜಲಾವೃತವಾಗಿದ್ದು, 14 ಗಂಜಿ ಕೇಂದ್ರಗಳನ್ನು ತೆರೆದು ಅಲ್ಲಿ ಸಂತ್ರಸ್ತರನ್ನು ಸ್ಥಳಾಂತರಿಸಲಾಗಿದೆ. ಮಳೆಯ ಹೊಡೆತಕ್ಕೆ ಅನೇಕ ಮನೆಗಳಿಗೆ ಹಾನಿಯಾಗಿದ್ದು, ಗೋಡೆ ಕುಸಿತದಿಂದಾಗಿ ಬಸವನ ಬಾಗೇವಾಡಿ ತಾಲೂಕಿನ ಮುತ್ತಗಿಯಲ್ಲಿ 15 ವರ್ಷದ ಬಾಲಕಿಗೆ ಗಾಯಗಳಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲೆಯಲ್ಲಿ ತಾಳಿಕೋಟೆ ತಾಲೂಕಿನಲ್ಲಿ ಅತೀ ಹೆಚ್ಚು ಅಂದರೆ 54.9 ಮೀ.ಮೀ ಮಳೆ ಸುರಿದಿದೆ. ವಿಜಯಪುರ ತಾಲೂಕಿನಲ್ಲಿ 40.7 ಮೀ.ಮೀ, ಬಸವನ ಬಾಗೇವಾಡಿ ತಾಲೂಕಿನಲ್ಲಿ 42.8 ಮೀ.ಮೀ, ಇಂಡಿಯಲ್ಲಿ 40.6 ಮೀ.ಮೀ, ಮುದ್ದೇಬಿಹಾಳ ತಾಲೂಕಿನಲ್ಲಿ 51.5 ಮೀ.ಮೀ, ಸಿಂದಗಿ ತಾಲೂಕಿನಲ್ಲಿ 40.9 ಮೀ.ಮೀ, ಬಬಲೇಶ್ವರ ತಾಲೂಕಿನಲ್ಲಿ 34.1 ಮೀ.ಮೀ, ಚಡಚಣ ತಾಲೂಕಿನಲ್ಲಿ 40.3 ಮೀ.ಮೀ, ನಿಡಗುಂದಿ ತಾಲೂಕಿನಲ್ಲಿ 52.7 ಮೀ.ಮೀ, ತಾಳಿಕೋಟೆ ತಾಲೂಕಿನಲ್ಲಿ 54.9 ಮೀ.ಮೀ, ತಿಕೋಟಾ ತಾಲೂಕಿನಲ್ಲಿ 38.7 ಮೀ.ಮೀ, ಕೊಲ್ಹಾರ ತಾಲೂಕಿನಲ್ಲಿ 40.0 ಮೀ.ಮೀ, ದೇವರಹಿಪ್ಪರಗಿ ತಾಲೂಕಿನಲ್ಲಿ 46 ಮೀ.ಮೀ ಹಾಗೂ ಆಲಮೇಲ ತಾಲೂಕಿನಲ್ಲಿ 42.4 ಮೀ.ಮೀ, ಮಳೆ ಸುರಿದಿದೆ.
ನಿನ್ನೆ ಮಧ್ಯರಾತ್ರಿ 12 ರಿಂದ ಆರಂಭವಾಗಿರುವ ಮಳೆಯ ಆರ್ಭಟ ನಿರಂತರವಾಗಿ ನಡೆಯುತ್ತಲೇ ಇದ್ದು, ಜನ-ಜೀವನದ ಮೇಲೆ ಪರಿಣಾಮ ಬೀರಿದೆ.
ಪ್ರವಾಹ ಪರಿಸ್ಥಿತಿ ಇರುವ ಗ್ರಾಮಗಳಲ್ಲಿ ಬೋಟ್‌ಗಳು ಜನರನ್ನು ಸುರಕ್ಷಿತವಾಗಿ ಇರಿಸುವ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದು, ಶಂಭೇವಾಡ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ 3 ಗರ್ಭೀಣಿಯರನ್ನು ದೇವಣಗಾಂವ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ದೋಣಿ ಮೂಲಕ ಸಾಗಿಸಲಾಗಿದೆ.
ಸೀನಾ ನದಿಯಿಂದ 1.5 ಲಕ್ಷ ಕ್ಯೂಸೆಕ್, ಉಜ್ಜನಿ ಜಲಾಶಯದಿಂದ 1 ಲಕ್ಷ ಹಾಗೂ ಭೀಮಾ ಜಲಾನಯನ ಮೂಲಗಳಿಂದ 5 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ, ಹೀಗಾಗಿ ಪ್ರವಾಹ ಪರಿಸ್ಥಿತಿ ಸಹಜವಾಗಿಯೇ ಮುಂದುವರೆಯುವ ಸಾಧ್ಯತೆ ದಟ್ಟವಾಗಿದೆ.
47 ಮನೆಗಳು ಹಾನಿ :
ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ 47 ಮನೆಗಳಿಗೆ ಹಾನಿಯಾಗಿದೆ ಎಂಬುದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಬಸವನ ಬಾಗೇವಾಡಿ ತಾಲೂಕಿನಲ್ಲಿ 4, ಬಬಲೇಶ್ವರ, ನಿಡಗುಂದಿ ತಾಲೂಕಿನಲ್ಲಿ ತಲಾ ಒಂದು, ತಿಕೋಟಾ ತಾಲೂಕಿನಲ್ಲಿ 3, ತಾಳಿಕೋಟೆಯಲ್ಲಿ 2, ವಿಜಯಪುರ ತಾಲೂಕಿನಲ್ಲಿ 6, ಚಡಚಣ ತಾಲೂಕಿನಲ್ಲಿ 4, ಸಿಂದಗಿ ತಾಲೂಕಿನಲ್ಲಿ 4, ಚಡಚಣ ತಾಲೂಕಿನಲ್ಲಿ 4, ಮುದ್ದೇಬಿಹಾಳ ತಾಲೂಕಿನಲ್ಲಿ 5, ಕೊಲ್ಹಾರ ತಾಲೂಕಿನಲ್ಲಿ 13 ಹಾಗೂ ದೇವರ ಹಿಪ್ಪರಗಿಯಲ್ಲಿ 4 ಮನೆಗಳಿಗೆ ಹಾನಿಯಾಗಿದೆ.
ಧಾರಕಾರವಾಗಿ ಸುರಿಯುತ್ತಿರುವ ಮಳೆ, ಭೀಮಾ, ಡೋಣಿ ನದಿ ಪ್ರವಾಹದಿಂದ ಅನೇಕ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸಿದ್ದು ಗ್ರಾಮಗಳು ನಡುಗಡ್ಡೆಯಾಗಿ ಪರಿವರ್ತನೆಯಾಗಿವೆ. ಅಲ್ಲಿ ನಿವಾಸಿಗಳ ಹಿತರಕ್ಷಣೆಗಾಗಿ ಜಿಲ್ಲೆಯಾದ್ಯಂತ ಒಟ್ಟು 16 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ವಿವಿಧ ಸರ್ಕಾರಿ ಶಾಲೆ, ಸಮುದಾಯ ಭವನಗಳನ್ನು ಕಾಳಜಿ ಕೇಂದ್ರಗಳಾಗಿ ಪರಿವರ್ತಿಸಲಾಗಿದ್ದು 867 ಜನರಿಗೆ ಆಶ್ರಯ ಕಲ್ಪಿಸಲಾಗಿದೆ.
ಅರ್ಜುಣಗಿ ಬಿ.ಕೆ, ಬರಗುಡಿ, ಚಿಕ್ಕಮಣೂರ, ಹಿಂಗಣಿ, ಖೇಡಗಿ, ಪಡನೂರ, ಮಿರಗಿ, ತಾವರಖೇಡಗ್ರಾಮದಲ್ಲಿ ಎರಡು, ತಾರಾಪೂರ, ಕುಮಸಗಿ ಗ್ರಾಮದಲ್ಲಿ ಮೂರು, ಶಂಭೇವಾಡದಲ್ಲಿ ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಒಟ್ಟು 140ಕ್ಕೂ ಹೆಚ್ಚು ಕುಟುಂಬಗಳು ಸೇರಿದಂತೆ 867 ಜನರಿಗೆ ಆಶ್ರಯ ಕಲ್ಪಿಸಲಾಗಿದೆ ಎಂದು ಮಾಹಿತಿ ಇದೆ.







