ವಿಜಯಪುರ: ಹಾಡಹಗಲೇ ನಡುರಸ್ತೆಯಲ್ಲಿ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪತಿ

ವಿಜಯಪುರ : ನಡುರಸ್ತೆಯಲ್ಲಿ ಹಾಡಹಗಲೇ ತನ್ನ ಪತ್ನಿಗೆ ವ್ಯಕ್ತಿಯೋರ್ವ ಮಾರಕಾಸ್ತ್ರದಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಸಿಂದಗಿ ಪಟ್ಟಣದ ಆನಂದ ಟಾಕೀಸ್ ಬಳಿ ನಡೆದಿದೆ.
ಘಟನೆಯಿಂದಾಗಿ ತೀವ್ರವಾಗಿ ಗಾಯಗೊಂಡಿರುವ ಮಹಿಳೆಯನ್ನು ಅನುಸೂಯಾ ಮಾದರ ಎಂದು ಗುರುತಿಸಲಾಗಿದೆ. ಯಮನಪ್ಪ ಮಾದರ ಹಲ್ಲೆ ನಡೆಸಿದ ಆರೋಪಿ.
ನಡು ರಸ್ತೆಯಲ್ಲಿಯೇ ಮಾರಕಾಸ್ತ್ರ ಹಿಡಿದು ಹಲ್ಲೆ ನಡೆಸಿರುವ ದೃಶ್ಯ ಮೊಬೈಲ್‌ಗಳಲ್ಲಿ ಸೆರೆಯಾಗಿದೆ. ಯಮನಪ್ಪ ತನ್ನ ಪತ್ನಿ ಮೇಲೆ ಹಲ್ಲೆ ನಡೆಸುತ್ತಿರುವಾಗ ಅಲ್ಲಿದ್ದವರು ಮಹಿಳೆಯ ರಕ್ಷಣೆಗೆ ಧಾವಿಸಿದ್ದು, ಈ ವೇಳೆ ಅವರತ್ತ ಆರೋಪಿ ಮಾರಕಾಸ್ತ್ರ ಪ್ರದರ್ಶಿಸಿದ್ದಾನೆ.
ತೀವ್ರವಾಗಿ ಗಾಯಗೊಂಡಿರುವ ಮಹಿಳೆಯನ್ನು ಸಿಂದಗಿ ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಂದಗಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಮುಂದುವರೆದಿದೆ.
Next Story





