ವಿಜಯಪುರ | ಸಾಲದ ಮೊತ್ತಕ್ಕಾಗಿ ವ್ಯಕ್ತಿಯನ್ನು ಒತ್ತೆ ಇಟ್ಟುಕೊಂಡ ಸಾಲಗಾರ: ಆರೋಪ

ಸಾಂದರ್ಭಿಕ ಚಿತ್ರ | PC
ವಿಜಯಪುರ : ಸಾಲ ಪಡೆದ ಹಣ ನೀಡದೇ ಇದ್ದ ಕಾರಣಕ್ಕೆ 27 ದಿನಗಳಿಂದ ವ್ಯಕ್ತಿಯೊಬ್ಬರನ್ನು ಒತ್ತೆಯಾಗಿಟ್ಟುಕೊಂಡಿರುವ ಆರೋಪ ಕೇಳಿ ಬಂದಿದ್ದು, ಘಟನೆ ವಿಜಯಪುರ ಜಿಲ್ಲೆಯಲ್ಲಿ ವರದಿಯಾಗಿದೆ.
ದೇವರಹಿಪ್ಪರಗಿ ತಾಲೂಕಿನ ಪಡಗಾನೂರು ಗ್ರಾಮದ ಉದಯಕುಮಾರ ಬಾವಿಮನಿ ಎಂಬುವವರನ್ನು ಬಸವನಬಾಗೇವಾಡಿ ಪಟ್ಟಣದ ನಿವಾಸಿ ಪ್ರಭಾಕರ ಢವಳಗಿ ಎಂಬುವವರು ಒತ್ತಯಾಲಾಗಿಟ್ಟುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಖಾಸಗಿ ಶಾಲಾ ಶಿಕ್ಷಕರಾಗಿ ಉದಯಕುಮಾರ ಅವರು, ಪ್ರಭಾಕರ ಢವಳಗಿ ಎಂಬವರಿಂದ ಸಾಲ ಪಡೆದಿದ್ದರು ಎನ್ನಲಾಗಿದೆ. ಇತ್ತ ಉದಯಕುಮಾರನನ್ನು ಬಿಡಿಸಲು ಕುಟುಂಬಸ್ಥರು ಕಷ್ಟಪಡುತ್ತಿದ್ದಾರೆ. 31.50 ಲಕ್ಷ ರೂ ಹಣ ಸಾಲದ ಹಣ ನೀಡಬೇಕು ಎಂದು ಉದಯಕುಮಾರ ಮನೆಯವರಿಗೆ ಪ್ರಭಾಕರ ಹೇಳುತ್ತಿದ್ದಾರೆ ಎನ್ನಲಾಗಿದೆ.
ಉದಯಕುಮಾರ ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಉದಯಕುಮಾರ ಪ್ರಭಾಕರ ಬಳಿ ಸಾಲ ಮಾಡಿದ್ದಾರೆ. ಆದರೆ ಯಾಕೆ, ಎಷ್ಟು ಸಾಲ ಮಾಡಿದ್ಧಾರೆಂಬುದು ಗೊತ್ತಿಲ್ಲ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.
"ಕಳೆದ 27 ದಿನಗಳಿಂದ ಪ್ರಭಾಕರ ನನ್ನ ಪತಿಯನ್ನು ಒತ್ತೆಯಳಾಗಿ ಇಟ್ಟುಕೊಂಡಿದ್ದಾರೆ. ಬೇಗ ಹಣ ಬೇಕೆಂದು ಕರೆ ಮಾಡುತ್ತಿದ್ದಾರೆ" ಎಂದು ಉದಯಕುಮಾರ ಅವರ ಪತ್ನಿ ಆರೋಪಿಸಿದ್ದಾರೆ.