ವಿಜಯಪುರ ಜಿಲ್ಲೆಯ ಮೂವರಿಗೆ ʼರಾಜ್ಯೋತ್ಸವ ಪ್ರಶಸ್ತಿʼ ಗರಿ

ಹ.ಮ.ಪೂಜಾರ/ಎಲ್.ಬಿ.ಶೇಖ್/ಸೋಮಣ್ಣ ದುಂಡಪ್ಪ ಧನಗೊಂಡ
ವಿಜಯಪುರ : 2025ನೇ ಸಾಲಿನ ʼಕನ್ನಡ ರಾಜ್ಯೋತ್ಸವ ಪ್ರಶಸ್ತಿʼಗೆ ಜಿಲ್ಲೆಯ ಮೂವರು ಸಾಧಕರು ಆಯ್ಕೆಯಾಗಿದ್ದಾರೆ. ಸಾಹಿತ್ಯ ಕ್ಷೇತ್ರದಿಂದ ಹ.ಮ.ಪೂಜಾರ, ಜಾನಪದ ಕ್ಷೇತ್ರದಿಂದ ಸೋಮಣ್ಣ ದುಂಡಪ್ಪ ಧನಗೊಂಡ ಹಾಗೂ ರಂಗಭೂಮಿ ಕ್ಷೇತ್ರದಿಂದ ಎಲ್.ಬಿ.ಶೇಖ್ (ಮಾಸ್ತರ್) ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಕ್ಕಳ ಮನಸ್ಸಿನ ಸಾಹಿತಿ ಹ.ಮ.ಪೂಜಾರಗೆ ʼರಾಜ್ಯೋತ್ಸವ ಪ್ರಶಸ್ತಿʼ :
ಮಕ್ಕಳ ಸಾಹಿತ್ಯಕ್ಕೆ ಅನುಪಮ ಕೊಡುಗೆ ನೀಡಿದ ಮಕ್ಕಳ ಮನಸ್ಸಿನ ಸಾಹಿತಿ ಹ.ಮ.ಪೂಜಾರ ಅವರು ʼಕನ್ನಡ ರಾಜ್ಯೋತ್ಸವ ಪ್ರಶಸ್ತಿʼಗೆ ಭಾಜನರಾಗಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿಯ ಹನುಮಂತರಾಯ ಮುನ್ನಪ್ಪ ಪೂಜಾರ ನಾಡಿನಾದ್ಯಂತ ಹ.ಮ.ಪೂಜಾರ ಎಂದೇ ಖ್ಯಾತಿ ಪಡೆದವರು. 1943ರಲ್ಲಿ ಸಿಂದಗಿಯಲ್ಲಿ ಜನಿಸಿದ ಪೂಜಾರ ಅವರು ಶಿಕ್ಷಣ, ಸಾಹಿತ್ಯ ಲೋಕಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ.
1961 ರಿಂದ 1993 ರವರೆಗೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ನಂತರ 1993 ರಿಂದ ಪ್ರಾಢಶಾಲಾ ಶಿಕ್ಷಕರಾಗಿ 2001 ರಲ್ಲಿ ಸೇವಾ ನಿವೃತ್ತಿ ಹೊಂದಿದವರು. ಶಿಕ್ಷಕರಾಗಿದ್ದಾಗಲೂ ಸೃಜನಶೀಲ ಚಟುವಟಿಕೆಗಳ ಮೂಲಕ ಜನಪ್ರಿಯತೆ ಪಡೆದಿದ್ದ ಅವರು ಮಕ್ಕಳಿಗಾಗಿ ಪ್ರತಿಭಾ ಪ್ರದರ್ಶನಕ್ಕೆ ಸಂಬಂಧಿಸಿದ ವಿಶೇಷ ಕಾರ್ಯಕ್ರಮ, ಪ್ರತಿ ತಿಂಗಳು ಕೊನೆಯ ದಿನ ಶಿಕ್ಷಕರಿಂದ ಮಾದರಿ ಪಾಠ ಕೊಡಿಸುವ ವಿಶೇಷ ಬೋಧನಾ ಶೈಲಿ ಹೀಗೆ ನಾನಾ ರೀತಿಯಲ್ಲಿ ಸೇವಾ ಕೈಂಕರ್ಯ ಕೈಗೊಂಡ ಪರಿಣಾಮವಾಗಿ ರಾಷ್ಟ್ರ ಮಟ್ಟದ ʼಶಿಕ್ಷಕ ಪ್ರಶಸ್ತಿʼ ಪಡೆದುಕೊಂಡಿದ್ದಾರೆ.
ಮಕ್ಕಳಿಗಾಗಿ ಅನೇಕ ಕವನ ಸಂಕಲನಗಳನ್ನು ರಚಿಸಿದ ಅವರು ನೀತಿಯ ಬದುಕು, ಪರಿಸರ, ಪರೋಪಕಾರ, ತುಂಟ ಮಂಗ, ಚಿಣ್ಣರ ಚೇತನ, ಯಾರು ಜಾಣರು, ನಮಸ್ಕಾರ ಪುನಃ ಬನ್ನಿ ಎಂಬ ಕೃತಿಗಳನ್ನು ರಚಿಸಿದ್ದಾರೆ. ಹುಬ್ಬಳ್ಳಿಯ ಮೂರು ಸಾವಿರ ಮಠದಿಂದ ಕೊಡಮಾಡುವ ʼಸಾಹಿತ್ಯ ಪ್ರಶಸ್ತಿ ಗೌರವʼ, ʼಮಹಾದೇವಪ್ಪ ಕರ್ಲಟ್ಟಿ ಸಾಹಿತ್ಯ ಪ್ರಶಸ್ತಿʼ ಮಕ್ಕಳ ಸಾಹಿತ್ಯ ಸಂಗಮದಿಂದ ʼಪರಿಸರʼ ಕೃತಿಗೆ ಸಾಹಿತ್ಯ ಪ್ರಶಸ್ತಿಯ ಗೌರವ, ಧಾರವಾಡದ ಚಿಲಿಪಿಲಿ ಪ್ರಕಾಶನದಿಂದ ʼಶಿಕ್ಷಣ ಸಿರಿʼ ವಿಜಯ ಪ್ರಕಾಶನ ಇವರಿಂದ ʼಶ್ರೀ ಗುರು ಪ್ರಶಸ್ತಿʼ ಸೇರಿದಂತೆ ಅನೇಕ ಪ್ರಶಸ್ತಿ ಸಮ್ಮಾನಗಳು ಅವರ ಮುಡಿಗೇರಿವೆ.
ರಂಗಭೂಮಿ ದಾಖಲೆ ʼಸರದಾರ' ಶೇಖ್ ಮಾಸ್ಟರ್ :
ಬಡ ಕುಟುಂಬದಲ್ಲಿ ಜನಿಸಿ ಕಲೆಯನ್ನೇ ಸರ್ವಸ್ವವಾಗಿಸಿಕೊಂಡು ರಂಗಭೂಮಿಯನ್ನೇ ಕರ್ಮಭೂಮಿಯಾಗಿಸಿಕೊಂಡ ಎಲ್.ಬಿ.ಶೇಖ್ ಮಾಸ್ತರ್ ಅವರಿಗೆ ʼರಾಜ್ಯೋತ್ಸವ ಪ್ರಶಸ್ತಿʼ ಒಲಿದು ಬಂದಿದೆ.
ಮುದ್ದೇಬಿಹಾಳ ತಾಲ್ಲೂಕಿನ ಲಿಂಗದಳ್ಳಿ ಗ್ರಾಮದವರು. ಬಾವಾಸಾಹೇಬ ಹಾಗೂ ಶಹಜಾಬಿ ದಂಪತಿಯ ಪುತ್ರನಾಗಿ 1955 ಸೆ.1 ರಂದು ಜನಿಸಿದ ಶೇಖ್ ಮಾಸ್ತರ್ ಬಡತನದ ಕಾರಣಕ್ಕೆ ಎಸೆಸೆಲ್ಸಿವರೆಗೆ ಶಿಕ್ಷಣ ಪಡೆದರೂ, ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಗಾಧ. ಪುಟ್ಟರಾಜ ಗವಾಯಿಗಳ ಶಿಷ್ಯರಾಗಿರುವ ಇವರು, ಬಾಲ್ಯದಿಂದಲೇ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.
1983ರಲ್ಲಿ ಹಾನಗಲ್ಲ ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ ಸ್ಥಾಪಿಸಿ ಸುಮಾರು 50 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 9 ಸಾವಿರಕ್ಕೂ ಅಧಿಕ ರಂಗ ಪ್ರಯೋಗಗಳ ಸಾರಥ್ಯ ವಹಿಸಿದ್ದು ದಾಖಲೆಯೇ ಸರಿ. ಕಿವುಡ ಮಾಡಿದ ಕಿತಾಪತಿ, ಭಗವಂತ ಕೊಟ್ಟ ಭಾಗ್ಯ, ಮುದುಕನ ಮದುವೆ, ತ್ಯಾಗಜೀವಿ, ಕೊರವಂಜಿ ಮೊದಲಾದ ನಾಟಕಗಳನ್ನು ನಿರ್ದೇಶಿಸಿ ಅಭಿನಯಿಸಿರುವ ಇವರ ರಂಗ ಸಾಧನೆ ಅಪಾರ.
ರಂಗ ಆರಾಧಕ, ರಂಗಕೇಸರಿ, ಕುಮಾರಶ್ರೀ, ಬಸವಶಾಂತಿ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳಿಗೆ ಶೇಖ್ ಮಾಸ್ತರ್ ಭಾಜನರಾಗಿದ್ದಾರೆ.
ಡೊಳ್ಳಿನ ಗಾಯಕ ಸೋಮಣ್ಣಗೆ ʼರಾಜ್ಯೋತ್ಸವ ಪ್ರಶಸ್ತಿʼ
ಬಿಜ್ಜರಗಿ ಸೋಮಲಿಂಗ ಎಂದೇ ಪ್ರಸಿದ್ಧಿಯಾದ ಸೋಮಣ್ಣ ದುಂಡಪ್ಪ ಧನಗೊಂಡ ಅವರು ಡೊಳ್ಳಿನ ಹಾಡುಗಾರಿಕೆಯ ಪ್ರವೀಣರು. ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ಸೋಮಣ್ಣ ದುಂಡಪ್ಪ ಧನಗೊಂಡ ಅವರು ಡೊಳ್ಳಿನ ಹಾಡನ್ನು ತಮ್ಮ ಬದುಕಿನ ಉಸಿರನ್ನಾಗಿಸಿಕೊಂಡು ಕಂಚಿನ ಕಂಠದೊಂದಿಗೆ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
2 ಸಾವಿರ ಹಾಡುಗಳನ್ನು ಮಧುರ ಕಂಠದಿಂದ ಹಾಡುವ ಸೋಮಣ್ಣ, 1995ರಲ್ಲಿ 29 ದಿನ ಕಾಲ ಸತತ ಡೊಳ್ಳಿನ ಹಾಡು ಕಾರ್ಯಕ್ರಮ ನೀಡುವ ಮೂಲಕ ಸಾಧನೆಗೈದಿದ್ದಾರೆ. 7 ತಲೆಮಾರಿನ ಹಾಲುಮತದ ಮಾರ್ಗವನ್ನು ಡೊಳ್ಳಿನ ಹಾಡಿನ ಮೂಲಕ ವಿವರಿಸುತ್ತಾರೆ. ಮಹಾತ್ಮರು, ಶರಣರು ಸೇರಿದಂತೆ ಪೌರಾಣಿಕ ಕತೆಗಳನ್ನು ಡೊಳ್ಳಿನ ಹಾಡಿನ ಮೂಲಕ ಜನರಿಗೆ ಮನಮುಟ್ಟುವಂತೆ ಹೇಳುತ್ತಾರೆ. ತತ್ವಪದ, ಗಂಗಿ ಸೀತಾಳ ಪದ, ಹರಕೆ ಹಾಡು, ಕಂಬಳಿ ಪದ, ಬೆಡಗಿನ ಗೀತೆಯ ಮೂಲಕ ಸತ್ಯ ಸಂಗತಿಗಳನ್ನು ವಿವರಿಸಿ ಸಾಮಾಜಿಕ ಸಂದೇಶ ಸಾರುತ್ತಾರೆ.
ಬಿಜ್ಜರಗಿ ಸೋಮಲಿಂಗ ಎಂದೇ ಪ್ರಸಿದ್ಧಿಯಾಗಿರುವ ಅವರ ಹಾಡುಗಳು ಇಂದಿನ ನವಮಾಧ್ಯಮಗಳಾದ ಯೂ-ಟ್ಯೂಬ್ಗಳಲ್ಲಿಯೂ ಅತ್ಯಂತ ಜನಪ್ರಿಯ, ಸಾವಿರಾರು ವೀಕ್ಷಣೆ ಪಡೆದಿರುವ ಇವರ ಡೊಳ್ಳಿನ ಹಾಡುಗಳು ಬಲು ಜನಪ್ರಿಯ.







